ಬೆಂಗಳೂರು: ರಾಜಧಾನಿಯ ಮಲ್ಲೇಶ್ವರಂ(Malleshwaram) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರನ್ನು(BJP Leaders) ಅವಹೇಳನ ಮಾಡುವಂತಹ ಪೋಸ್ಟರ್‌ಗಳು(Poster) ಪ್ರತ್ಯಕ್ಷವಾಗಿದೆ.
ಮಲ್ಲೇಶ್ವರಂ 15ನೇ ಕ್ರಾಸ್‌ನ ಬಿಎಂಟಿಸಿ ಬಸ್ ನಿಲ್ದಾಣದ ಗೋಡೆ ಹಾಗೂ ಐತಿಹಾಸಿಕ ಕಾಡುಮಲ್ಲೇಶ್ವರ ದೇವಸ್ಥಾನದ ಪಕ್ಕದ ಕಾಂಪೌಂಡ್ ಗೋಡೆಗೆ ಕಿಡಿಗೇಡಿಗಳು ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನು ಮುದ್ರಿಸಲಾಗಿದೆ.
ಯಾರ ಕಣ್ಣಿಗೂ ಬೀಳದಂತೆ ನಿನ್ನೆ ಮಧ್ಯರಾತ್ರಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇಂದು ಮುಂಜಾನೆ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಹಾಗೂ ಕಾರ್ಯಕರ್ತರು ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಹರಿದು ತೆರವುಗೊಳಿಸಿದ್ದಾರೆ.
ದೇವಸ್ಥಾನದ ಪಕ್ಕದಲ್ಲೇ ಇಂತಹ ಪೋಸ್ಟರ್‌ಗಳನ್ನು ಅಂಟಿಸಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.


