ಗಾಲೆ: ಭಾರತ (Team India) ತಂಡದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಮಂಗಳವಾರ ಶ್ರೀಲಂಕಾ (Sri Lanka) ವಿರುದ್ಧ ಗಾಲೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ (Test Match) ನೂತನ ಇತಿಹಾಸ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 100 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರವಾಗಿದ್ದಾರೆ.
ಶ್ರೀಲಂಕಾದ ವೇಗದ ಬೌಲರ್ ಲಹಿರು ಕುಮಾರ ಎಸೆತವನ್ನು ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಲಾಂಗ್ ಲೆಗ್ ಮೇಲೆ ಭರ್ಜರಿ ಸಿಕ್ಸರ್‌ಗಟ್ಟುವ ಮೂಲಕ ಪಂತ್ ಈ ಮೈಲಿಗಲ್ಲನ್ನು ತಲುಪಿದರು.
ಶ್ರೀಲಂಕಾ ಫೀಲ್ಡರ್ ಚೆಂಡನ್ನು ಹಿಡಿಯಲು ಯತ್ನಿಸಿದರಾದರೂ, ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್ ಆಯಿತು. ಈ ಸಿಕ್ಸರ್‌ನೊಂದಿಗೆ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 20ನೇ ಅರ್ಧಶತಕವನ್ನೂ ಪೂರೈಸಿದರು. ಅಂತಿಮವಾಗಿ 66 ರನ್(69 ಎಸೆತ, 8 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು.
ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್‌ಗಳು:
ಬೆನ್ ಸ್ಟೋಕ್ಸ್ (ಇಂಗ್ಲೆಂಡ್) – 138 ಸಿಕ್ಸರ್‌ಗಳು
ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) – 107 ಸಿಕ್ಸರ್‌ಗಳು
ರಿಷಭ್ ಪಂತ್ (ಭಾರತ) – 100 ಸಿಕ್ಸರ್‌ಗಳು
ಆ್ಯಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ) – 100 ಸಿಕ್ಸರ್‌ಗಳು
ಈ ಮೂಲಕ ಜಾಗತಿಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 100 ಸಿಕ್ಸರ್ ಬಾರಿಸಿದ ಕೇವಲ ನಾಲ್ಕನೇ ಬ್ಯಾಟರ್ ಹಾಗೂ ಮೊದಲ ಭಾರತೀಯ ಎಂಬ ಹಿರಿಮೆಗೆ ರಿಷಭ್ ಪಂತ್ ಭಾಜನರಾಗಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್‌ಕೀಪರ್ ಆ್ಯಡಮ್ ಗಿಲ್‌ಕ್ರಿಸ್ಟ್ ಅವರ 100 ಸಿಕ್ಸರ್‌ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದನ್ನೂ ಓದಿ: ನ.10ಕ್ಕೆ ಅನಿರುದ್ಧ್-ಕಾವ್ಯಾ ಮಾರನ್ ಮದುವೆ?

ಸೋಲಿನತ್ತ ಲಂಕಾ
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 48.5 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಯ್ತು. ಕೆಎಲ್ ರಾಹುಲ್ 35 ರನ್, ದೇವದತ್ ಪಡಿಕ್ಕಲ್ 44 ರನ್ ಹೊಡೆದು ಔಟಾದರು.
372 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ಈಗಾಗಲೇ 84 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಮಾನವ್ ಸುತಾರ್ 2 ವಿಕೆಟ್ ಪಡೆದರೆ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.
47 ರನ್‌ಗಳಿಗೆ ಲಂಕಾ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ನಾಯಕ ಧನಂಜಯ್ ಡಿ ಸಿಲ್ವಾ 31 ರನ್, ಸೋನಲ್ ದಿನುಷಾ 25 ರನ್‌ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
