ಕಿರುತೆರೆಯ ಜನಪ್ರಿಯ ನಟಿ ಹಾಗೂ ರೂಪದರ್ಶಿ ಶ್ವೇತಾ ಪ್ರಸಾದ್ (Shwetha Prasad) ತಮ್ಮ ಹಂಚಿಕೊಂಡಿರುವ ತೀಕ್ಷ್ಣವಾದ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದಾ ಗ್ಲಾಮರಸ್ ಹಾಗೂ ಸಕಾರಾತ್ಮಕ ವಿಚಾರಗಳಿಂದಲೇ ಗಮನ ಸೆಳೆಯುತ್ತಿದ್ದ ನಟಿ, ಈ ಬಾರಿ ಸತ್ಯ, ನ್ಯಾಯ ಮತ್ತು ಮಹಿಳಾ ರಕ್ಷಣೆಯ ಹೆಸರಿನಲ್ಲಿ ನಡೆಯುವ ಬೂಟಾಟಿಕೆಯನ್ನು ಪ್ರಶ್ನಿಸಿ ನೇರ ಪ್ರಹಾರ ನಡೆಸಿದ್ದಾರೆ.
ಹಿಂದೆಂದೂ ಇಷ್ಟೊಂದು ಕಟು ಶಬ್ದಗಳಲ್ಲಿ ಅಸಮಾಧಾನ ಹೊರಹಾಕದ ಶ್ವೇತಾ, ಕೇವಲ ಸ್ಟೋರಿ ಹಾಕುವುದಕ್ಕೆ ಸೀಮಿತವಾಗದೆ ಪೋಸ್ಟ್ (Insta Post) ರೂಪದಲ್ಲೇ ಈ ಅಭಿಪ್ರಾಯವನ್ನು ಹಂಚಿಕೊಂಡಿರುವುದು ವಿಶೇಷ. ಸಮಾಜದಲ್ಲಿ ಸತ್ಯ, ನ್ಯಾಯ ಮತ್ತು ಮಹಿಳೆಯರ ಸುರಕ್ಷತೆ ಕುರಿತು ಭಾಷಣ ಬಿಗಿಯುವವರ ನೈಜ ಮುಖವಾಡವನ್ನು ಅವರು ಪರೋಕ್ಷವಾಗಿ ಕಳಚಿಟ್ಟಿದ್ದಾರೆ. ಯಾರನ್ನು ಅಥವಾ ಯಾವ ನಿರ್ದಿಷ್ಟ ಘಟನೆಯನ್ನು ಉದ್ದೇಶಿಸಿ ಈ ಚಾಟಿ ಬೀಸಿದ್ದಾರೆ ಎಂಬ ಕುತೂಹಲ ಸದ್ಯ ಅವರ ಅಭಿಮಾನಿಗಳಲ್ಲಿ ಮೂಡಿದೆ.
ಪೋಸ್ಟ್‌ನಲ್ಲಿ ಏನಿದೆ?
ಸತ್ಯದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಅದಕ್ಕಾಗಿ ಗಟ್ಟಿಯಾಗಿ ನಿಂತಿದ್ದರೆ, ನ್ಯಾಯದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಅದಕ್ಕಾಗಿ ಹೋರಾಡಿದ್ದರೆ ಮತ್ತು ಹೆಣ್ಣಿನ ರಕ್ಷಣೆಯ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ನಿಜವಾಗಿಯೂ ಆಕೆಯನ್ನು ರಕ್ಷಿಸಿದ್ದರೆ, ಈ ಜಗತ್ತು ಇಷ್ಟೊತ್ತಿಗಾಗಲೇ ಸಂಪೂರ್ಣ ಬದಲಾಗಿರುತ್ತಿತ್ತು.
View this post on Instagram
ಮಾತನಾಡುವುದು ಸುಲಭ. ಭರವಸೆಗಳನ್ನು ನೀಡುವುದು ಸುಲಭ. ತತ್ವ-ಸಿದ್ಧಾಂತಗಳನ್ನು ಬೋಧಿಸುವುದು ಇನ್ನೂ ಸುಲಭ. ಈ ಜಗತ್ತು ಕೇವಲ ಬೂಟಾಟಿಕೆಯ ಮಾತುಗಳು, ಟೊಳ್ಳು ಭರವಸೆಗಳು ಮತ್ತು ತಾವೇ ಪಾಲಿಸದ ತತ್ವಗಳನ್ನು ಇತರರಿಗೆ ಬೋಧಿಸುವ ಜನರಿಂದಲೇ ತುಂಬಿಹೋಗಿದೆ.
ಯಾವುದಾದರೂ ಕಷ್ಟದ ಸಂದರ್ಭ ಬಂದಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆಯೇ ನಮ್ಮ ನೈಜ ವ್ಯಕ್ತಿತ್ವ ತಿಳಿಯುತ್ತದೆ. ಹಾಗಾಗಿಯೇ, ಜನ ಏನು ಹೇಳುತ್ತಾರೆಂಬುದನ್ನು ಕೇಳುವುದನ್ನು ನಾನು ಈಗ ಬಿಟ್ಟುಬಿಟ್ಟಿದ್ದೇನೆ. ಅವರು ನಿಜವಾಗಿ ಏನು ಮಾಡುತ್ತಾರೆಂಬುದನ್ನಷ್ಟೇ ಗಮನಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಶ್ವೇತಾ ಪ್ರಸಾದ್ ಅವರ ಈ ನೇರ ಮತ್ತು ನಿಷ್ಠುರ ಬರಹಕ್ಕೆ ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಕೂಡ ಪ್ರತಿಕ್ರಿಯಿಸಿದ್ದು, ನಿಜ (True) ಎಂದು ಕಾಮೆಂಟ್ ಮಾಡುವ ಮೂಲಕ ಸಾಥ್ ನೀಡಿದ್ದಾರೆ. ಅವರ ಈ ಪೋಸ್ಟ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಾಸ್ತವ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

