– ಅಧಿಕಾರಿಗಳ ವರದಿ ವಿರುದ್ಧ ಸ್ಥಳೀಯರ ಆಕ್ರೋಶ
ಮಡಿಕೇರಿ: ಕಾವೇರಿ ನದಿ ನೀರು ಮೈಸೂರು, ಬೆಂಗಳೂರು ಸೇರಿದಂತೆ ಹಲವು ಭಾಗಗಳ ಜನರ ಜೀವನಾಡಿ. ಕಾವೇರಿಯ ಉಗಮ ಪ್ರದೇಶವಾಗಿರುವ ಕೊಡಗಿನ (Kodagu) ಜಲಮೂಲಗಳ ಸಂರಕ್ಷಣೆ ಅತ್ಯಂತ ಮಹತ್ವದ್ದು. ಆದರೆ, ಕುಶಾಲನಗರ ತಾಲ್ಲೂಕಿನ ಸರ್ಕಾರಿ ಕೆರೆಗಳ ಸ್ಥಿತಿ ಇದೀಗ ಆತಂಕಕ್ಕೆ ಕಾರಣವಾಗಿದೆ.
ತಾಲ್ಲೂಕಿನಲ್ಲಿರುವ 139 ಸರ್ಕಾರಿ ಕೆರೆಗಳ ಪೈಕಿ 68 ಕೆರೆಗಳು ಒತ್ತುವರಿಗೆ (Lake Encroachment) ಒಳಗಾಗಿವೆ. ಒತ್ತುವರಿ ತೆರವು ಮಾಡಲಾಗಿದೆ ಎಂದು ಅಧಿಕಾರಿಗಳ ವರದಿಯಲ್ಲಿ ಉಲ್ಲೇಖವಿದ್ದರೂ, ಸ್ಥಳದಲ್ಲಿ ಒತ್ತುವರಿ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.
ಜಲಮೂಲ ಉಳಿದರೆ ನೀರು ಉಳಿಯುತ್ತೆ.. ನೀರು ಉಳಿದರೆ ಕೃಷಿ ಉಳಿಯುತ್ತೆ..! ಆದರೆ, ಕುಶಾಲನಗರ ತಾಲ್ಲೂಕಿನಲ್ಲಿ ಕೆರೆಗಳೇ ಒತ್ತುವರಿ ಪಾಲಾಗುತ್ತಿವೆ ಎನ್ನಲಾಗ್ತಿದೆ. ತಾಲ್ಲೂಕಿನಲ್ಲಿ ಒಟ್ಟು 139 ಸರ್ಕಾರಿ ಕೆರೆಗಳಿವೆ. ಈ ಕೆರೆಗಳಿಗೆ ಸೇರಿದ ಒಟ್ಟು ಭೂಮಿ ಸುಮಾರು 258 ಎಕರೆ. ಇದರಲ್ಲಿ 68 ಕೆರೆಗಳು ಒತ್ತುವರಿಗೆ ಒಳಗಾಗಿವೆ ಎಂದು ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ. ಅಂದರೆ, ಸರ್ಕಾರಿ ಕೆರೆಗಳ ದೊಡ್ಡ ಭಾಗವೇ ಒತ್ತುವರಿ ಸಮಸ್ಯೆ ಎದುರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಕೆರೆ ನಿಜಕ್ಕೂ ಒತ್ತುವರಿ ಆಗಿದೆಯಾ ಅನ್ನೋ ಮತ್ತೊಂದು ಆರೋಪವೂ ಕೇಳಿಬಂದಿದೆ.

ದಾಖಲೆಗಳ ಪ್ರಕಾರ ಒತ್ತುವರಿ ತೆರವುಗೊಳಿಸಿ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಕೆರೆಗಳನ್ನ ಹಸ್ತಾಂತರಿಸಲಾಗಿದೆ ಎಂದು ಉಲ್ಲೇಖವಿದೆ. ಆದರೆ, ಸ್ಥಳೀಯರ ಆರೋಪವೇ ಬೇರೆ. ಒತ್ತುವರಿ ತೆರವು ಮಾಡಲಾಗಿದೆ ಎನ್ನಲಾಗಿರುವ ಕೆರೆಗಳಲ್ಲಿಯೇ ಇಂದಿಗೂ ಒತ್ತುವರಿ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ. ಒತ್ತುವರಿದಾರರಿಗೆ ನೋಟಿಸ್ ನೀಡಿಲ್ಲ.. ಪ್ರಕರಣ ದಾಖಲಿಸಿಲ್ಲ.. ಕೆರೆಗಳ ವಾಸ್ತವ ಸ್ಥಿತಿಯನ್ನೂ ಪರಿಶೀಲಿಸಿಲ್ಲ.. ಎಂಬ ಆರೋಪಗಳು ಕೇಳಿಬಂದಿವೆ. 139 ಕೆರೆಗಳನ್ನ ಉಳಿಸುವ ಉದ್ದೇಶವೇ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕಾಣುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಕಳೆದ ಎರಡು ವರ್ಷಗಳಿಂದ ದೂರುಗಳನ್ನ ನೀಡುತ್ತಿದ್ದೇವೆ. ಆದರೂ ಒಂದು ನೋಟಿಸ್ ನೀಡಿಲ್ಲ, ಒತ್ತುವರಿ ತೆರವು ಮಾಡಿಲ್ಲ. ಕೆರೆಗಳ ಸ್ಥಿತಿಯನ್ನು ಪರಿಶೀಲಿಸುವ ಕೆಲಸವೂ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದು ಕೇವಲ 139 ಸರ್ಕಾರಿ ಕೆರೆಗಳ ಸಮಸ್ಯೆ ಮಾತ್ರವಲ್ಲ. ಬೋಗಣಿ ಕೆರೆ ಸೇರಿದಂತೆ ಹಲವು ಜಲಮೂಲಗಳ ಸ್ಥಿತಿಯನ್ನೂ ಸಮಗ್ರವಾಗಿ ಪರಿಶೀಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸರ್ಕಾರ ಕೆರೆಗಳ ಸರ್ವೇ ನಡೆಸಲು ಆದೇಶ ನೀಡಿದೆ ಎನ್ನಲಾಗುತ್ತಿದ್ದರೂ, ಸ್ಥಳೀಯ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ. ಒತ್ತುವರಿ ತೆರವು ಕಾರ್ಯ ನಡೆದಿಲ್ಲ. ಕೆರೆಗಳ ಅಭಿವೃದ್ಧಿಯೂ ಕಣ್ಣಿಗೆ ಕಾಣುತ್ತಿಲ್ಲ. ಹೀಗಾಗಿ, ಸರ್ಕಾರದ ಆದೇಶಗಳು ಕಾಗದದ ಮೇಲೆಯೇ ಉಳಿದಿವೆಯಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ. ಒಂದು ಕಡೆ ಕಾವೇರಿ ನೀರಿಗಾಗಿ ರಾಜ್ಯಗಳ ನಡುವೆ ಹೋರಾಟ ನಡೆಯುತ್ತದೆ. ಇನ್ನೊಂದು ಕಡೆ ಕಾವೇರಿಯ ಉಗಮ ಜಿಲ್ಲೆಯಲ್ಲೇ ಕೆರೆಗಳು ಒತ್ತುವರಿಗೆ ಸಿಲುಕುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.
ಮಳೆ ಕೈಕೊಟ್ಟರೆ ಕುಶಾಲನಗರ ತಾಲ್ಲೂಕಿನಲ್ಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಸ್ಥಳೀಯರದ್ದು. ಹೀಗಾಗಿ, ಕೆರೆಗಳ ಸಮಗ್ರ ಸರ್ವೇ ನಡೆಸಬೇಕು, ಒತ್ತುವರಿ ತೆರವು ಮಾಡಬೇಕು, ಹೂಳೆತ್ತಬೇಕು ಹಾಗೂ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಒಟ್ಟಾರೆ, ಕುಶಾಲನಗರ ತಾಲ್ಲೂಕಿನ 139 ಸರ್ಕಾರಿ ಕೆರೆಗಳು ಕೇವಲ ನೀರು ಸಂಗ್ರಹಿಸುವ ತಾಣಗಳಲ್ಲ. ಇವು ರೈತರ ಕೃಷಿಗೆ ಆಧಾರ. ಜನರ ಕುಡಿಯುವ ನೀರಿನ ಭದ್ರತೆ. ಮತ್ತು ಕಾವೇರಿ ಜಲಮೂಲದ ಸಂರಕ್ಷಣೆಯ ಭಾಗ. ಕೆರೆ ಒತ್ತುವರಿ ತೆರವಾಗುತ್ತಾ? ಅಧಿಕಾರಿಗಳ ದಾಖಲೆಗಳಿಗೂ, ವಾಸ್ತವ ಸ್ಥಿತಿಗೂ ಇರುವ ಅಂತರ ಕಡಿಮೆಯಾಗುತ್ತಾ? ಈ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಉತ್ತರ ನೀಡಬೇಕಿದೆ.

