ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಖಾಸಗಿ ಕಚೇರಿಗಳಲ್ಲಿ ಟೇಬಲ್ ಹಾಕಿಕೊಂಡು ಸಾಮೂಹಿಕವಾಗಿ ಪ್ರಕ್ರಿಯೆ ನಡೆಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ಬಿಎಲ್‌ಒ ಕಡ್ಡಾಯವಾಗಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪರಿಶೀಲಿಸಬೇಕು ಮತ್ತು ನಿಗದಿತ ಅರ್ಜಿಗಳನ್ನು ವಿತರಿಸಬೇಕು. ಆದರೆ ಬಿಟಿಎಂ ಲೇಔಟ್‌ನ(BTM Layout) ಕೆಲ ಅಧಿಕಾರಿಗಳು ತಮ್ಮ ಕಾನೂನುಬಾಹಿರವಾಗಿ ಖಾಸಗಿ ಸ್ಥಳ ಧಾರ್ಮಿಕ ಕೇಂದ್ರಗಳನ್ನು ಬಳಸಿಕೊಂಡಿದ್ದಾರೆ. ಇದು ಪಾರದರ್ಶಕ ಮತಪಟ್ಟಿ ಪರಿಷ್ಕರಣೆಗೆ ಅಧಿಕಾರಿಗಳೇ ಅಡ್ಡಿಪಡಿಸುತ್ತಿದ್ದಾರಾ ಎಂಬ ಸಂಶಯವನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ರಾಮನಗರದ ಚೌಟ್ರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ – ಹೆಚ್‌ಡಿಕೆಯಿಂದ ವಿಡಿಯೋ ಸಾಕ್ಷಿ ಬಿಡುಗಡೆ

ಕಳೆದ ಎರಡು ದಿನಗಳ ಹಿಂದೆ ಬಿಟಿಎಂ ಲೇಔಟ್‌ನ ಖಾಸಗಿ ಕಚೇರಿಯ ಮುಂಭಾಗದಲ್ಲಿ ಬಿಎಲ್‌ಒಗಳು ಟೇಬಲ್ ಹಾಕಿಕೊಂಡು ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿದ್ದರು. ಖಾಸಗಿ ಜಾಗಗಳಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಇಡೀ ಏರಿಯಾದ ಜನರು ಒಂದೇ ಕಡೆ ಸಾಮೂಹಿಕವಾಗಿ ಜಮಾಯಿಸಿದ್ದು, ಅಲ್ಲಿ ಜನಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಖಾಸಗಿ ಜಾಗದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ವಿರೋಧ ಮತ್ತು ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಬಿಎಲ್‌ಒಗಳು ಸ್ಥಳದಿಂದ ತರಾತುರಿಯಲ್ಲಿ ಕಾಲ್ಕಿತ್ತಿದ್ದಾರೆ. ಆದಾಗ್ಯೂ, ನಿಯಮ ಉಲ್ಲಂಘನೆಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
