ಲಕ್ನೋ: ಉತ್ತರ ಪ್ರದೇಶದ (Uttar Pradesh) ಕೌಶಂಬಿಯಲ್ಲಿ ಎಲ್‌ಪಿಜಿ (LPG Tanker) ಸಾಗಿಸುತ್ತಿದ್ದ ಟ್ಯಾಂಕರ್, ಟೋಲ್ ಬೂತ್‌ಗೆ ಡಿಕ್ಕಿ ಹೊಡೆದ ಸ್ಫೋಟಗೊಂಡಿದ್ದು, ಐದು ಜನರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಹಲವರು ಗಾಯಗೊಂಡಿದ್ದಾರೆ.
ಜೂನ್ 26 ರಂದು ಬೆಳಗ್ಗೆ 6:40 ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಇಂದು ಬೆಳಗ್ಗೆ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. 24 ಸೆಕೆಂಡುಗಳ ವೀಡಿಯೊದಲ್ಲಿ ಎರಡು ಟ್ಯಾಂಕರ್‌ಗಳು ಟೋಲ್ ಬೂತ್ ಸಮೀಪಿಸುತ್ತಿರುವುದನ್ನು ತೋರಿಸಿದೆ. ಅವುಗಳಲ್ಲಿ ಒಂದು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು, ಡಿವೈಡರ್‌ಗೆ ಗುದ್ದಿ ನಂತರ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ 45 ಎಕರೆ ಜಾಗ, ಕೆಜಿಗಟ್ಟಲೆ ಚಿನ್ನ – ತೆಲಂಗಾಣ ಡಿಎಸ್‌ಪಿಯ 200 ಕೋಟಿ ಸಾಮ್ರಾಜ್ಯ ಬಯಲಿಗೆಳೆದ ಎಸಿಬಿ
ಅಪಘಾತಕ್ಕೀಡಾದ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿ, ಭಾರಿ ಸ್ಫೋಟ ಸಂಭವಿಸಿದೆ. ಕೆಲವು ಕ್ಷಣಗಳ ನಂತರ, ದಟ್ಟವಾದ ಹೊಗೆ ಆ ಪ್ರದೇಶವನ್ನು ಆವರಿಸಿದೆ. ತಕ್ಷಣ ಟ್ಯಾಂಕರ್ ಸ್ಫೋಟಗೊಂಡು ಬೆಂಕಿ ಜ್ವಾಲೆ ಆವರಿಸಿತು. ಜ್ವಾಲೆಗಳು ಎಷ್ಟು ತೀವ್ರವಾಗಿತ್ತೆಂದರೆ, ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಗೋಚರಿಸಿತ್ತು ಎಂದು ವರದಿಯಾಗಿದೆ.
40 ವರ್ಷದ ಧರ್ಮೇಂದ್ರ ದುಬೆ ಎಂಬ ಚಾಲಕ ಮತ್ತು ಟೋಲ್ ಪ್ಲಾಜಾ ಉದ್ಯೋಗಿ ಅಲೋಕ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಇತರ ಟೋಲ್ ಪ್ಲಾಜಾ ಕಾರ್ಮಿಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಟೋಲ್ ಪ್ಲಾಜಾ ಬಳಿ ನಿಲ್ಲಿಸಿದ್ದ ಹದಿನಾರು ಮೋಟಾರ್ ಬೈಕ್‌ಗಳು ಮತ್ತು ಎರಡು ಕಾರುಗಳು ಸಹ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟುಹೋಗಿವೆ. ಸಂಚಾರ ದಟ್ಟಣೆಯನ್ನು ತಡೆಗಟ್ಟಲು ವಾಹನಗಳನ್ನು ಟೋಲ್ ಪ್ಲಾಜಾದ ಮೂಲಕ ಶುಲ್ಕವಿಲ್ಲದೆ ಹಾದುಹೋಗಲು ತಾತ್ಕಾಲಿಕವಾಗಿ ಅನುಮತಿಸಲಾಯಿತು. ಅಪಘಾತದ ತನಿಖೆಗಾಗಿ ತಾಂತ್ರಿಕ ತಂಡವನ್ನು ರಚಿಸಲಾಗಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ 2-3 ತಿಂಗಳು ಕಡಿಮೆ ಇದ್ರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಕೇಂದ್ರ ಸಚಿವ ಪುರಿ
