ನವದೆಹಲಿ: ಕಚ್ಚಾ ತೈಲ (Crude Oil) ಬೆಲೆ ಇಳಿಕೆಯ ಹಾದಿಯಲ್ಲೇ ಸಾಗಿದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಬಗ್ಗೆ ಯೋಚಿಸಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ತಿಳಿಸಿದ್ದಾರೆ.
ಚಿಲ್ಲರೆ ಇಂಧನ ಬೆಲೆಗಳ ಮುನ್ಸೂಚನೆಯ ಕುರಿತು ಮಾತನಾಡಿದ ಪುರಿ, ಪ್ರಸ್ತುತ ಪೆಟ್ರೋಲ್ ಪಂಪ್‌ಗಳಲ್ಲಿ ಮಾರಾಟವಾಗುತ್ತಿರುವ ಇಂಧನವನ್ನು ಅಂತರರಾಷ್ಟ್ರೀಯ ಬೆಲೆಗಳು ಹೆಚ್ಚಿದ್ದಾಗ ಖರೀದಿಸಿದ ಕಚ್ಚಾ ತೈಲದಿಂದ ಸಂಸ್ಕರಿಸಲಾಗಿದೆ. ಹೀಗಾಗಿ, ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಇತ್ತೀಚಿನ ಕುಸಿತದ ಪ್ರಯೋಜನವು ಇನ್ನೂ ಚಿಲ್ಲರೆ ದರಗಳಲ್ಲಿ ಸಂಪೂರ್ಣವಾಗಿ ಪ್ರತಿಫಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇರಾನ್ ಯುದ್ಧದಿಂದ ತೈಲ ಕಂಪನಿಗಳಿಗೆ 74,781 ಕೋಟಿ ನಷ್ಟ – ಹರ್ದೀಪ್ ಸಿಂಗ್ ಪುರಿ
ಮುಂದಿನ ಎರಡು-ಮೂರು ತಿಂಗಳ ಕಾಲ ಕಚ್ಚಾ ತೈಲದ ಬೆಲೆಗಳು ಕಡಿಮೆಯಾಗಿಯೇ ಮುಂದುವರಿದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol-Diesel) ಇಳಿಕೆಯಾಗಬಹುದು ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ (OMCs) ಮೇಲಿನ ಆರ್ಥಿಕ ಒತ್ತಡದ ಬಗ್ಗೆ ಸಚಿವರು ತಿಳಿಸಿದ್ದಾರೆ. ಮಧ್ಯಪ್ರಾಚ್ಯ ಯುದ್ಧದಿಂದ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರಿಂದ ಜೂ.30 ರ ವರೆಗೆ ಭಾರತದ ತೈಲ ಮಾರಾಟ ಕಂಪನಿಗಳಿಗೆ 74,781 ಕೋಟಿ ರೂ. ನಷ್ಟವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಭೀಕರ ದಾಳಿಯಿಂದ ಬಚಾವ್ ಆಗಿ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ ತೈಲ ಟ್ಯಾಂಕರ್

