– ಜಲಮಂಡಳಿ ಅಧ್ಯಕ್ಷರಿಂದ ಪರಿಶೀಲನೆ – ಶೀಘ್ರವೇ ಉದ್ಘಾಟಿಸಲಿದ್ದಾರೆ ಡಿಸಿಎಂ
ಬೆಂಗಳೂರು: ಜಪಾನ್‌ನ ಜೈಕಾ (JICA) ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಕಾವೇರಿ 5ನೇ ಹಂತದ ಯೋಜನೆಯ ಪ್ರಮುಖ ಭಾಗವಾಗಿರುವ ಅತ್ಯಾಧುನಿಕ ‘ಸಮಗ್ರ ಜಲ ಮತ್ತು ಒಳಚರಂಡಿ ನಿರ್ವಹಣಾ ಕೇಂದ್ರ’ವು (SCADA) ಉದ್ಘಾಟನೆಗೆ ಸಿದ್ಧವಾಗುತ್ತಿದ್ದು, ಇಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಕೇಂದ್ರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಈ ಬೃಹತ್ ಕಮಾಂಡ್ ಕೇಂದ್ರವನ್ನು ಶೀಘ್ರದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಜಯನಗರದ ಶಿಂಶಾ ಭವನದಲ್ಲಿ ಸ್ಥಾಪಿಸಲಾಗಿರುವ ಈ ಸಮಗ್ರ ಕಮಾಂಡ್ ಸೆಂಟರ್ ಏಷ್ಯಾದಲ್ಲೇ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದ್ದು, ಇಡೀ ನಗರದ ಕುಡಿಯುವ ನೀರು ಮತ್ತು ಒಳಚರಂಡಿ ಜಾಲವೆರಡನ್ನೂ ಒಂದೇ ಸೂರಿನಡಿ ನಿರ್ವಹಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇದನ್ನೂ ಓದಿ: 15 ವರ್ಷದ ಬಳಿಕ ನ್ಯೂಜಿಲೆಂಡ್ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – ಭಾರತಕ್ಕೆ ಏನು ಲಾಭ?
ಈ ಹೊಸ SCADA ಕೇಂದ್ರದ ಪ್ರಮುಖ ವೈಶಿಷ್ಟ್ಯಗಳು:
110 ಹಳ್ಳಿಗಳಿಗೆ 775 MLD ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಯ ಜೊತೆಗೆ ನಗರದ ಎಲ್ಲಾ ಹಂತಗಳ ಸಮಗ್ರ ಕುಡಿಯುವ ನೀರು ಮತ್ತು ಒಳಚರಂಡಿ ಜಾಲವನ್ನು ಏಕಕಾಲದಲ್ಲಿ, ನೈಜ ಸಮಯದಲ್ಲಿ (Real-time) ಕಣ್ಗಾವಲಿಡುವ ಹಾಗೂ ನಿರ್ವಹಣೆ ಮಾಡುವ ಬೃಹತ್ ವ್ಯವಸ್ಥೆ ಇದಾಗಿದೆ.
ಕೃತಕ ಬುದ್ಧಿಮತ್ತೆ (AI) ಬಳಕೆ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ಯಾವ ಪ್ರದೇಶದಲ್ಲಿ ಎಷ್ಟು ನೀರಿನ ಬೇಡಿಕೆ ಇದೆ ಎಂಬುದನ್ನು ನಿಖರವಾಗಿ ಅಂದಾಜಿಸಲಾಗುತ್ತದೆ. ಎಲ್ಲಾದರೂ ಪೈಪ್‌ಲೈನ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದ್ದರೆ ತಕ್ಷಣ ಪತ್ತೆಹಚ್ಚಿ ನೀರು ಪೋಲಾಗುವುದನ್ನು (UFW/NRW) ತಡೆಯಬಹುದಾಗಿದೆ. ಭವಿಷ್ಯದಲ್ಲಿ ಇಡೀ ಜಾಲದ ‘ಡಿಜಿಟಲ್ ಟ್ವಿನ್’ (Digital Twin) ರಚನೆಗೆ ಈ ಕೇಂದ್ರವೇ ಅಡಿಪಾಯವಾಗಿದೆ.

ನೈಜ ಸಮಯದಲ್ಲಿ ನೀರಿನ ಗುಣಮಟ್ಟ ಪರಿಶೀಲನೆ: ಟಿ.ಕೆ. ಹಳ್ಳಿ, ಹಾರೋಹಳ್ಳಿ, ತಾತಗುಣಿ ಜಲಶುದ್ಧೀಕರಣ ಘಟಕಗಳು ಹಾಗೂ ನಗರದ ಎಲ್ಲಾ ನೆಲಮಟ್ಟದ ಜಲಾಗಾರಗಳನ್ನು (GLR) ಈ ಕಮಾಂಡ್ ಸೆಂಟರ್‌ಗೆ ಜೋಡಿಸಲಾಗಿದೆ. ನೀರು ಪೂರೈಕೆಯಾಗುವಾಗಲೇ ಅದರ ಗುಣಮಟ್ಟವನ್ನು (ಕ್ಲೋರಿನ್, pH, TDS, Turbidity) ನಿರಂತರವಾಗಿ ಅಳೆಯಲಾಗುತ್ತದೆ. ನೀರು ಕಲುಷಿತಗೊಂಡರೆ ತಕ್ಷಣವೇ ಅಲರ್ಟ್ ಸಂದೇಶ ರವಾನೆಯಾಗಲಿದ್ದು, ಜನರಿಗೆ ಅತ್ಯಂತ ಸುರಕ್ಷಿತ ಕುಡಿಯುವ ನೀರು ಪೂರೈಕೆಯಾಗುವುದು ಖಚಿತವಾಗಿದೆ.
NGT ಮಾನದಂಡ ಮತ್ತು ಬಯೋ ಗ್ಯಾಸ್ ಕಣ್ಗಾವಲು: ಕುಡಿಯುವ ನೀರು ಮಾತ್ರವಲ್ಲದೆ, ನಗರದ ಎಲ್ಲಾ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (STP) ಈ ಕೇಂದ್ರಕ್ಕೆ ಸಂಯೋಜಿಸಲಾಗಿದೆ. ಸಂಸ್ಕರಿಸಿದ ನೀರು NGT ಮಾನದಂಡಗಳ ಪ್ರಕಾರ ಇದೆಯೇ ಎಂಬುದನ್ನು ಪರಿಶೀಲಿಸುವುದು ಹಾಗೂ ಘಟಕಗಳಲ್ಲಿ ಉತ್ಪತ್ತಿಯಾಗುವ ‘ಬಯೋ ಗ್ಯಾಸ್’ ಪ್ರಮಾಣವನ್ನು ಕೂಡ ಇಲ್ಲಿಂದಲೇ ನಿರಂತರವಾಗಿ ಮಾನಿಟರ್ ಮಾಡಲಾಗುವುದು. ಇದನ್ನೂ ಓದಿ: ನಿಜವಾದ ಅಪರಾಧ ತನಿಖೆ ಮಾಡಿ, ಅಧಿಕಾರ ದುರ್ಬಳಕೆ ಮಾಡಬೇಡಿ – ಪೊಲೀಸರ ನಡೆಗೆ ಹೈಕೋರ್ಟ್ ಕೆಂಡಾಮಂಡಲ
ಮುನ್ಸೂಚನಾ ನಿರ್ವಹಣೆ (Predictive Maintenance): ಐಒಟಿ (IoT) ತಂತ್ರಜ್ಞಾನದ ಮೂಲಕ ಸಾರ್ವಜನಿಕ ಬೋರ್‌ವೆಲ್‌ಗಳು, ಜಿಐಎಸ್ (GIS) ಹಾಗೂ ಸ್ಮಾರ್ಟ್ ಮೀಟರ್‌ಗಳನ್ನು ಒಗ್ಗೂಡಿಸಲಾಗಿದೆ. ಯಾವುದಾದರೂ ಯಂತ್ರ ಕೆಡುವ ಮುನ್ನವೇ ಎಚ್ಚರಿಕೆ ನೀಡುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇದರಿಂದ ಜಲಮಂಡಳಿಯ ಕಾರ್ಯಾಚರಣೆ ಆರ್ಥಿಕ ಹೊರೆ ಹಾಗೂ ವಿದ್ಯುತ್ ವೆಚ್ಚ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ.
ಕುಡಿಯುವ ನೀರು ಹಾಗೂ ತ್ಯಾಜ್ಯ ನೀರಿನ ನಿರ್ವಹಣೆ ಅದರಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಲಾಗುತ್ತಿರುವ ಏಷ್ಯಾ ಖಂಡದ ಅತಿದೊಡ್ಡ ನಿಯಂತ್ರಣಾ ಕೇಂದ್ರವನ್ನು ಬೆಂಗಳೂರು ಜಲಮಂಡಳಿ ಅನುಷ್ಠಾನಗೊಳಿಸಿರುವುದು ಬಹಳ ಸಂತಸದ ಸಂಗತಿಯಾಗಿದೆ. ಸಂಪೂರ್ಣ ಪಾರದರ್ಶಕತೆ ಹಾಗೂ ಅತ್ಯುನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ಇಂಟೆಲಿಜೆಂಟ್ ಸ್ಕಾಡಾ ಕೇಂದ್ರವು ಬೆಂಗಳೂರು ನಗರದ ಜಲ ಹಾಗೂ ಒಳಚರಂಡಿ ನಿರ್ವಹಣೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ಜಲಮಂಡಳಿ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

