ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನೂತನವಾಗಿ ಅಳವಡಿಸಲಾಗಿರುವ ‘ಸ್ಟೇಟ್ ಆಫ್ ದಿ ಆರ್ಟ್’ ಎಲ್‌ಇಡಿ ಫ್ಲಡ್‌ಲೈಟಿಂಗ್ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಗಿದೆ.
2010 ರಿಂದ ಬಳಕೆಯಲ್ಲಿದ್ದ ಹಳೆಯ ಮೆಟಲ್-ಹ್ಯಾಲೈಡ್ ಫ್ಲಡ್‌ಲೈಟ್‌ಗಳ (LED Floodlight) ಜಾಗದಲ್ಲಿ ಜಾಗತಿಕ ಗುಣಮಟ್ಟದ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಇಂಟೆಲಿಜೆಂಟ್ DMX ಲೈಟಿಂಗ್ ಕಂಟ್ರೋಲ್ ತಂತ್ರಜ್ಞಾನ ಹೊಂದಿರುವ ಈ ಯೋಜನೆಯನ್ನು ಪೂರ್ಣಗೊಳಿಸಿದೆ.
ಹೊಸ ಫ್ಲಡ್‌ಲೈಟ್ ವೈಶಿಷ್ಟ್ಯಗಳೇನು?
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಫ್ಲಡ್‌ಲೈಟ್ ವ್ಯವಸ್ಥೆಯು ಪಂದ್ಯದ ವೇಳೆ ಪಿಚ್ ಮೇಲೆ 3,500 LUX (ಲಕ್ಸ್ ಅಂದ್ರೆ ಬೆಳಕಿನ ತೀವ್ರತೆ) ಹಾಗೂ ಔಟ್‌ಫೀಲ್ಡ್‌ನ ಮೇಲೆ 2,500 LUX ಎಲ್‌ಯುಎಕ್ಸ್‌ಗಿಂತಲೂ ಹೆಚ್ಚಿನ ಬೆಳಕನ್ನು ಚೆಲ್ಲುವುದರಿಂದ ಆಟಗಾರರು ಮತ್ತು ಪ್ರೇಕ್ಷಕರಿಗೆ ಹಗಲಿನ ಪಂದ್ಯದಂತಹ ಅನುಭವವನ್ನ ನೀಡಲಿದೆ.

ಗಂಟೆಗೆ 150 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಬರುವ ಕ್ರಿಕೆಟ್ ಬಾಲ್‌ನ್ನ HD, ಅಲ್ಟ್ರಾ HD (4K) ಮತ್ತು ಸೂಪರ್ ಸ್ಲೋ-ಮೋಷನ್ ಕ್ಯಾಮೆರಾಗಳಲ್ಲಿ ಯಾವುದೇ ಫ್ಲಿಕರಿಂಗ್ ಇಲ್ಲದೇ ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿಯಲು ಈ ಲೈಟಿಂಗ್ ವ್ಯವಸ್ಥೆ ನೆರವಾಗಲಿದೆ. ಬಹುಮುಖ್ಯವಾಗಿ ಹಳೆಯ ಸಾಂಪ್ರದಾಯಿಕ ಫ್ಲಡ್‌ಲೈಟ್‌ಗಳಿಗೆ ಹೋಲಿಸಿದ್ರೆ ಈ ಹೊಸ ಎಲ್‌ಇಡಿ ವ್ಯವಸ್ಥೆಯು ಶೇ.40 ರಷ್ಟು ವಿದ್ಯುತ್ ಉಳಿಸಲಿದ್ದು, ಡೀಸೆಲ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಒಟ್ಟಿನಲ್ಲಿ ಪರಿಸರ ಸ್ನೇಹಿ ಹೆಜ್ಜೆ ಇದಾಗಿದೆ.
ಮಹಾರಾಜ ಟ್ರೋಫಿ T-20 ಟೂರ್ನಿಯ ಅಂತಿಮ ಹಂತದ ಪಂದ್ಯಗಳು ಇಂದಿನಿಂದ ಜು.12ರ ವರೆಗೆ ನಡೆಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂತನ ಬೆಳಕಿನಡಿಯಲ್ಲಿ ಪಂದ್ಯಗಳು ಶುರುವಾಗಿದೆ.
ಇಂದು ಪಂದ್ಯಕ್ಕೂ ಮುನ್ನ ನಡೆದ ನೂತನ ಫ್ಲಡ್‌ಲೈಟ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಕೆಎಸ್‌ಸಿಎ ಅಧ್ಯಕ್ಷ ಬಿ.ಕೆ ವೆಂಕಟೇಶ್ ಪ್ರಸಾದ್, ಹ್ಯಾವೆಲ್ಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಮುನೀಶ್ ಪೆಶಿನ್, ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಜಿ. ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
