ಬೆಂಗಳೂರು: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಪರಿಣಾಮವಾಗಿ ಉತ್ತರ ಕರ್ನಾಟಕದ ನದಿಗಳಿಗೆ ಜೀವಕಳೆ ಬಂದಿದೆ. ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿದ್ದರೂ ಸಹ ಮಹಾರಾಷ್ಟ್ರದ ಮಳೆಯಿಂದಾಗಿ ಜನ ತುಸು ನಿಟ್ಟುಸಿರು ಬಿಡುವಂತಾಗಿದೆ. ಬೆಳಗಾವಿಯ ಹಲವೆಡೆ ಮಳೆ ಆಗುತ್ತಿದೆ.
ಕಾವೇರಿಯ ಒಳಹರಿವಿನಲ್ಲಿ ಸ್ವಲ್ಪ ಹೆಚ್ಚಾಗಿದೆ. ಈ ಮಧ್ಯೆ, 13ಕ್ಕೂ ಹೆಚ್ಚು ರಾಜ್ಯಗಳಿಗೆ ಐಎಂಡಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತದಿಂದ ದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ವೇದಗಂಗಾ, ಧೂದ್‌ಗಂಗಾ ಅಬ್ಬರ
ವೇದಗಂಗಾ ಹಾಗೂ ಧೂದ್‌ಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯತ್ತಿವೆ. ಪರಿಣಾಮ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಮೂರು ಸೇತುವೆಗಳು ಜಲಾವೃತಗೊಂಡಿವೆ. ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೇತುವೆ ಕಾರದಗಾ-ಬೋಜ್‌ನ್ನು ಸಂಪರ್ಕಿಸುತ್ತೆ. ಈ ಸೇತುವೆ ಈಗ ಸಂಪೂರ್ಣವಾಗಿ ಜಲಾವೃತವಾಗಿದೆ. ಇತ್ತ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾರವಾಡ- ಕನ್ನೂರು-ಬೋಜವಾಡಿ-ಗಜರವಾಡಿ ಸೇತುವೆ ಮುಳುಗಡೆಯಾಗಿದೆ. ರಸ್ತೆ ಸಂಪರ್ಕ ಬಹುತೇಕ ಕಡಿದು ಹೋಗಿದೆ.
ಕಳಸಾ ಬಂಡೂರಿ ನಾಲೆ ಭರ್ತಿ
ಕಳೆದ 3 ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರ ಹಾಗೂ ಬೆಳಗಾವಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಖಾನಾಪುರ ತಾಲೂಕಿನ ಪಾಂಡರಿ ನದಿ ಸೇರಿದಂತೆ ಕಳಸಾ – ಬಂಡೂರಿ ನಾಲೆಗಳು ತುಂಬಿ ಹರಿಯತ್ತಿವೆ. ಇದರಿಂದ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಖಾನಾಪೂರ ಅರಣ್ಯದಲ್ಲಿರುವ ಹಲವಾರು ಫಾಲ್ಸ್‌ಗಳು ಧುಮ್ಮಿಕ್ಕುತ್ತಿವೆ. 9ಕ್ಕೂ ಹೆಚ್ಚು ಜಲಪಾತಗಳಿಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ.
ಖಾನಾಪುರದ ದೇಗುಲ ಜಲಾವೃತ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ಒಳ ಹರಿವು ಬರುತ್ತಿದೆ. ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ಸ್ವಯಂ ಭೂ ಆಂಜನೇಯ ದೇವಸ್ಥಾನ ಮುಳುಗಡೆ ಆಗಿದೆ. ಮಂದಿರದ ಗರ್ಭಗುಡಿ ಸೇರಿದಂತೆ ರಾಮ, ಲಕ್ಷ್ಮಣ, ಸೀತಾ ಮೂರ್ತಿಗಳು ಮತ್ತು ಶಿವನ ಮಂದಿರ ಕೂಡ ಈಗಾಗಲೇ ನೀರಿನಲ್ಲಿ ಮುಳುಗಿವೆ.
ಗೋಕಾಕ್ ಫಾಲ್ಸ್‌ಗೆ ಜೀವ ಕಳೆ ಬಂದಿದೆ. ಜಲವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದ್ದು, ಧುಪದಾಳ ಜಲಾಶಯಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದರು.
ಮೂಡಿಗೆರೆಯಲ್ಲಿ ಅವಾಂತರ
ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು, ಮನೆ ಸಂಪೂರ್ಣ ಜಖಂ ಆಗಿದೆ. ಗೌಡಹಳ್ಳಿ ಗ್ರಾಮಕ್ಕೆ ಸಂಪರ್ಕ ಬೆಸೆಯುವ ರಸ್ತೆಯಲ್ಲಿ, ದೈತ್ಯ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಕ್ಕಿ ಗ್ರಾಮದ ಬಳಿ ಮರ ಬಿದ್ದ ಕಾರಣ ಬೆಟ್ಟಗೆರೆ-ಹ್ಯಾರೆಗುಡ್ಡ ಮಾರ್ಗವಾಗಿ ಸಂಚರಿಸುವಂತೆ, ಸ್ಥಳೀಯರಲ್ಲಿ ಮನವಿ ಮಾಡಲಾಗಿದೆ.
ಸಕಲೇಶಪುರದಲ್ಲಿ ಜಡಿ ಮಳೆ
ಹಾಸನದ ಸಕಲೇಶಪುರದಲ್ಲಿ ಸುರಿದ ಜಡಿ ಮಳೆಗೆ ಡಾಲರ್ಸ್ ಕಾಲೋನಿಯಲ್ಲಿ ತಡೆಗೋಡೆ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ. ಪವಾಡ ಸದೃಶ್ಯದ ರೀತಿಯಲ್ಲಿ ಮನೆಯಲ್ಲಿ ಮಲಗಿದ್ದವರು ಪಾರಾಗಿದ್ದಾರೆ. ಬಡಾವಣೆಗೆ ಮಣ್ಣು ಕುಸಿಯದಂತೆ 25 ಅಡಿ ಎತ್ತರ, 150 ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಮಾಡಿದ್ದು, ಕಾಮಗಾರಿ ಮುಂದುವರೆದಿತ್ತು. ಕಳೆದ ಎರಡು ದಿನಗಳಿಂದ ಬಾರಿ ಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ತಡರಾತ್ರಿ ತಡೆಗೋಡೆ ಕುಸಿದಿದೆ. ಮಧುಕುಮಾರ್, ಅಬ್ದುಲ್ ಮುನಾಫ್ ಎಂಬುವವರ ಮನೆಗಳು ಜಖಂಗೊಂಡಿದ್ದು ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯುಂಟಾಗಿದೆ.
ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ
ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಹೊಸ ಕಳೆ ಬಂದಿದೆ. ಬರೋಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಜಲಾಶಯಕ್ಕೆ 1 ಸಾವಿರ ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಕಾವೇರಿ ಜಲಾನಯನ ಪ್ರದೇಶದ ಕೆಲವೆಡೆ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುವ ನೀರಿನ ಪ್ರಮಾಣದಲ್ಲಿ ಅಲ್ಪ ಮಟ್ಟದ ಏರಿಕೆ ಕಂಡುಬಂದಿದೆ. ಇದರಿಂದ ಕೊಂಚ ನಿಟ್ಟುಸಿರು ಪಡುವಂತಾಗಿದೆ.
ಭರ್ತಿಯಾದ ತುಂಗಾ ಜಲಾಶಯ
ಮಲೆನಾಡು ಶಿವಮೊಗ್ಗದಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ ಮೂರು ದಿನದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಹಿನ್ನೆಲೆ ಶಿವಮೊಗ್ಗದ ತುಂಗಾ ಜಲಾಶಯ ಭರ್ತಿ ಆಗಿದೆ. ತುಂಗಾ ಡ್ಯಾಂ 10 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ 18.051 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 3.24 ಟಿಎಂಸಿ ಸಾಮರ್ಥ್ಯದ ತುಂಗಾ ಜಲಾಶಯಕ್ಕೆ ಪ್ರಸ್ತುತ 20,565 ಕ್ಯೂಸೆಕ್ ನೀರು ಒಳಹರಿವು ಇದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ನಿರಂತರ ಮಳೆಯಿಂದ ಜೀವ ಕಳೆ ಬಂದಿದೆ.
ಜೋಗ್‌ಫಾಲ್ಸ್‌ಗೆ ಜೀವಕಳೆ
ಮೂರು ದಿನದಿಂದ ಶಿವಮೊಗ್ಗದ ಶರಾವತಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆ ಆಗ್ತಿದ್ದು ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ರಾಜ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲುಗಳಾಗಿ ಧುಮ್ಮಿಕ್ಕುತ್ತಿವೆ. ಭಾನುವಾರದ ರಜೆ ಹಿನ್ನಲೆ ಜೋಗಕ್ಕೆ ಪ್ರವಾಸಿಗರ ದಂಡೇ ಬಂದಿದೆ.
