ಬಾಗಲಕೋಟೆ: ನಗರದ 50 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆಯುತ್ತಿರಬಹುದು ಎಂಬ ಗಂಭೀರ ಅನುಮಾನವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ(Nagalakshmi Choudhary) ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ಸರ್ಕಾರಿ ಆಸ್ಪತ್ರೆಗೆ(Bagalkote Government Hospital) ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 30 ಹೆರಿಗೆಗಳಾಗುತ್ತಿವೆ. ಆದರೆ, ದಾಖಲೆಗಳನ್ನು ಗಮನಿಸಿದಾಗ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಜನನ ಪ್ರಮಾಣವೇ ಹೆಚ್ಚಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಹೆಣ್ಣು ಮಗುವಿನ ಜನನ ಪ್ರಮಾಣ ಹೆಚ್ಚಿರಬೇಕು, ಆದರೆ ಇಲ್ಲಿ ಗಂಡು ಮಕ್ಕಳ ಸಂಖ್ಯೆ ಹೆಚ್ಚಿರುವುದು ಭ್ರೂಣ ಹತ್ಯೆ ನಡೆಯುತ್ತಿರಬಹುದು ಎಂಬ ಬಲವಾದ ಸಂಶಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಜನನ ಪ್ರಮಾಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಸಂಪೂರ್ಣ ಮಾಹಿತಿ ಹಾಗೂ ಅಧಿಕೃತ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್: ಜಾವೆಲಿನ್‌ನಲ್ಲಿ ಭಾರತದ ಮೂವರು ಫೈನಲ್ ಪ್ರವೇಶ
ತಮ್ಮ ಭೇಟಿಯ ವೇಳೆ ಆಸ್ಪತ್ರೆಗೆ ಬಂದಿದ್ದ ಸಾರ್ವಜನಿಕರು ಹಾಗೂ ಮಹಿಳೆಯರ ಕುಂದುಕೊರತೆಗಳನ್ನು ಆಲಿಸಿದ ನಾಗಲಕ್ಷ್ಮಿ ಚೌಧರಿ ಅವರು, ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಹೇಳಿದರು. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ.
