ಬೆಂಗಳೂರು: ಮದುವೆಯಾದ ಮೂರೇ ತಿಂಗಳಿಗೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ, ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಮನೆಗೆ ಬೀಗ ಹಾಕಿ ಪರಾರಿಯಾದ ಘಟನೆ ಬೆಂಗಳೂರಿನ (Bengaluru Crime) ಕುಂಬಳಗೋಡು ಸಮೀಪದ ಗೇರುಪಾಳ್ಯದಲ್ಲಿ ಬೆಳಕಿಗೆ ಬಂದಿದೆ.
ಬಿಹಾರ (Bihar) ಮೂಲದ ರಿಯಾ ಕುಮಾರಿ ಮೃತ ಮಹಿಳೆ. ಆರೋಪಿ ಪತಿ ಧೀರಜ್ ಕುಮಾರ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಾಲ್ಕು ತಿಂಗಳ ಹಿಂದೆ ಈ ದಂಪತಿ ಬಿಹಾರದಿಂದ ಬೆಂಗಳೂರಿಗೆ ಬಂದು ಗೇರುಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ರಿಯಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಧೀರಜ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದರೆ, ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸ್ನೇಹಿತರು ಹಲವು ಬಾರಿ ಸಮಾಧಾನ ಮಾಡಿದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ.
ಜಗಳ ತೀವ್ರಗೊಂಡ ವೇಳೆ ಧೀರಜ್ ಪತ್ನಿಯನ್ನು ಕೊಲೆ ಮಾಡಿ, ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಮನೆಯೊಳಗೆ ಬಿಟ್ಟು ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ರಿಯಾ ಸ್ನೇಹಿತೆ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದಾಳೆ. ಆಗ ಕಿಟಕಿ ಬಳಿ ನೊಣಗಳು ಕಂಡುಬಂದಿದ್ದು, ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಬಾಗಿಲು ತೆರೆದು ನೋಡಿದಾಗ ಬೆಡ್‌ಶೀಟ್‌ನಲ್ಲಿ ಸುತ್ತಿದ್ದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಕುಂಬಳಗೋಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್.ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಊಟ ಬಡಿಸಲು ತಡ ಮಾಡಿದ್ದಕ್ಕೆ ಅತ್ತಿಗೆ ಶಿರಚ್ಛೇದ – ರುಂಡವನ್ನು ಮರಕ್ಕೆ ನೇತಾಕಿದ ಮೈದುನ
ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಧೀರಜ್ ಕುಮಾರ್‌ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆತನ ಬಂಧನದ ಬಳಿಕ ಕೊಲೆಗೆ ನಿಖರ ಕಾರಣ ಏನು ಎಂಬುದು ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ‘ಮಿಸೆಸ್ ಗ್ಲೋಬ್ ಕ್ಲಾಸಿಕ್ 2026’ ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಅರ್ಪಿತಾ
