ಬೆಂಗಳೂರು: ರಾಜ್ಯ ಪೊಲೀಸರ (Karnataka Police) ವಿಚಿತ್ರ ನಡೆ ಹಾಗೂ ಕಾರ್ಯವೈಖರಿಯ ಬಗ್ಗೆ ಹೈಕೋರ್ಟ್ (Karnataka High Court) ಮತ್ತೊಮ್ಮೆ ಕೆಂಡಾಮಂಡಲವಾಗಿದೆ. “ಪೊಲೀಸರು ಏನು ಬೇಕಾದರೂ ಮಾಡಿಬಿಡುತ್ತೀರಿ, ಆದರೆ ನಿಜವಾದ ಅಪರಾಧಗಳ ಬಗ್ಗೆ ತನಿಖೆ ಮಾಡುವುದನ್ನು ಬಿಟ್ಟು ಜನರನ್ನು ಅಲೆದಾಡಿಸುತ್ತೀರಿ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಚನ್ನಪಟ್ಟಣದ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2024ರಲ್ಲಿ ಎರಡು ಹಸುಗಳು (Cows) ನಾಪತ್ತೆಯಾಗಿದ್ದವು. ಹಸುಗಳು ಕಾಣೆಯಾದ ಎರಡು ವರ್ಷಗಳ ನಂತರ ಅಂದರೆ 2026ರಲ್ಲಿ ಪೊಲೀಸರು ಈ ಸಂಬಂಧ ದೂರುದಾರನ ನೆರೆಮನೆಯವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದರು. ತಮ್ಮ ಮೇಲೆ ದಾಖಲಾದ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು.
ವಿಚಾರಣೆ ಸಂದರ್ಭದಲ್ಲಿ ಹಸುಗಳು ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ಪೊಲೀಸರು ಒಂದು ಇಡೀ ಕುಟುಂಬದ ವಿರುದ್ಧವೇ ಪ್ರಕರಣ ದಾಖಲಿಸಿದ್ದಕ್ಕೆ ಸಿಟ್ಟಾದ ನ್ಯಾಯಾಲಯ, ಜನರು ದೂರು ನೀಡಲು ಪೊಲೀಸ್ ಠಾಣೆಗೆ ನೂರು ಬಾರಿ ಅಲೆಯಬೇಕಾಗುತ್ತದೆ. ಅಷ್ಟಾದರೂ ನೀವು ಎಫ್‌ಐಆರ್ ದಾಖಲಿಸುವುದಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಹಸು ಕಾಣೆಯಾಗಿದೆ ಎಂದ ತಕ್ಷಣ ಇಡೀ ಕುಟುಂಬದ ಮೇಲೆ ಪ್ರಕರಣ ದಾಖಲಿಸುತ್ತೀರಿ. ಇದು ಕಾನೂನಿನ ಸ್ಪಷ್ಟ ದುರ್ಬಳಕೆ ಎಂದು ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಇದು ನನ್ನ ಸತ್ಯಾಗ್ರಹ – ಹಿಂದೆ ಸರಿಯಲ್ಲ ಎಂದು ಜಡ್ಜ್ ಹೇಳಿದ ಬೆನ್ನಲ್ಲೇ ವಿಚಾರಣೆಗೆ ಬರಲ್ಲ ಎಂದ ಕೇಜ್ರಿವಾಲ್

ರಾಜ್ಯ ಸರ್ಕಾರ ಮತ್ತು ಪೊಲೀಸರು ಹಸುಗಳ ತನಿಖೆ ಮಾಡುವುದನ್ನು ಬಿಟ್ಟು, ಸಮಾಜದಲ್ಲಿ ನಡೆಯುತ್ತಿರುವ ಗಂಭೀರ ಮತ್ತು ನೈಜ ಅಪರಾಧಗಳ ಬೆನ್ನತ್ತಬೇಕು. ದೂರು ನೀಡಲು ಬರುವ ಜನರನ್ನು ಅಲೆದಾಡಿಸುವ ಪ್ರವೃತ್ತಿ ನಿಲ್ಲಬೇಕು ಎಂದು ಸೂಚಿಸಿತು.
ಹಸು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ವಿರುದ್ಧ ದಾಖಲಾಗಿದ್ದ ತನಿಖಾ ಪ್ರಕ್ರಿಯೆಗೆ ಕೋರ್ಟ್ ತಡೆಯಾಜ್ಞೆ ನೀಡಿತು. ಅಷ್ಟೇ ಅಲ್ಲದೇ ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಟ್ಟು ಇಂತಹ ನಡೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿತು. ಇದನ್ನೂ ಓದಿ: ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಚಿತ್ರೀಕರಣ ಕೇಸ್ – ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಏನಿದು ಪ್ರಕರಣ?
ಚನ್ನಪಟ್ಟಣದ ದಾಸಯ್ಯ ಎಂಬುವವರು 2024ರ ಆಗಸ್ಟ್ 18ರಂದು ತಮ್ಮ ಎರಡು ಸೀಮೆ ಹಸುಗಳನ್ನು ಮೇಯಲು ಕಟ್ಟಿ ಹಾಕಿ ಮನೆಗೆ ತೆರಳಿದ್ದರು. ಮರಳಿ ಬಂದು ನೋಡಿದಾಗ ಹಸುಗಳು ನಾಪತ್ತೆಯಾಗಿದ್ದವು. ಸುಮಾರು ಒಂದೂವರೆ ವರ್ಷದ ಬಳಿಕ, ಅಂದರೆ 2026ರ ಮಾರ್ಚ್ 25ರಂದು ದಲ್ಲಾಳಿ ಶೇಖರ ಎಂಬಾತ ದಾಸಯ್ಯನವರಿಗೆ ಸಿಕ್ಕಿ, ನಿಮ್ಮ ಹಸುಗಳನ್ನು ಮಂಗಳಮ್ಮ, ಚೇತನ್, ಚಂದನ್ ಮತ್ತು ಸೌಮ್ಯ ಎಂಬುವವರು ನನ್ನ ಮೂಲಕ ಮಾರಾಟ ಮಾಡಿಸಿದ್ದಾರೆ. ನಾನು ಒಂದು ಸಾವಿರ ರೂಪಾಯಿ ಕಮಿಷನ್ ಪಡೆದು ಮೈಲನಾಯಕನಹೊಸಹಳ್ಳಿಯ ಹರೀಶನಿಗೆ ಮಾರಾಟ ಮಾಡಿದ್ದೇನೆ ಎಂದು ತಿಳಿಸಿದ್ದರು. ಈ ಮಾಹಿತಿ ಆಧಾರದಲ್ಲಿ ಎಂ ಕೆ ದೊಡ್ಡಿ ಠಾಣೆಯಲ್ಲಿ ದಾಸಯ್ಯ ದೂರು ನೀಡಿದ್ದು ಪೊಲೀಸರು ನಾಲ್ವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 302 (2) (ಕಳವು) ಪ್ರಕರಣ ದಾಖಲಿಸಿದ್ದರು.

