ನವದೆಹಲಿ: ಮಾತುಕತೆ ಆರಂಭವಾಗಿ 15 ವರ್ಷಗಳ ಬಳಿಕ ಭಾರತ (India) ಮತ್ತು ನ್ಯೂಜಿಲೆಂಡ್(New Zealand) ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಇಂದು(ಏ.27) ದೆಹಲಿಯ ಭಾರತ್ ಮಂಟಪದಲ್ಲಿ ಅಧಿಕೃತವಾಗಿ ಸಹಿ ಹಾಕಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್(Piyush Goyal) ಮತ್ತು ನ್ಯೂಜಿಲೆಂಡ್‌ನ ವಾಣಿಜ್ಯ ಸಚಿವ ಟಾಡ್ ಮೆಕ್ಲೇ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದಿಂದ ಭಾರತದಿಂದ ನ್ಯೂಜಿಲೆಂಡ್‌ಗೆ ರಫ್ತಾಗುವ 100% ಸರಕುಗಳಿಗೆ (8,284 ಉತ್ಪನ್ನಗಳು) ಮೊದಲ ದಿನದಿಂದಲೇ ಶೂನ್ಯ ಸುಂಕದ (Duty-free) ಸೌಲಭ್ಯ ಸಿಗಲಿದೆ. ನ್ಯೂಜಿಲೆಂಡ್‌ನಿಂದ ಬರುವ ಸುಮಾರು 95% ರಷ್ಟು ಸರಕುಗಳ ಮೇಲಿನ ಸುಂಕವನ್ನು ಭಾರತವು ಹಂತಹಂತವಾಗಿ ಕಡಿಮೆ ಮಾಡಲಿದೆ ಅಥವಾ ರದ್ದುಗೊಳಿಸಲಿದೆ.
ಭಾರತದ ರಫ್ತಾಗುವ ಜವಳಿ(Textiles), ಚರ್ಮದ ವಸ್ತುಗಳು, ಫಾರ್ಮಾಸ್ಯುಟಿಕಲ್ಸ್, ಎಂಜಿನಿಯರಿಂಗ್ ಮತ್ತು ಅಟೋಮೊಬೈಲ್ ಸರಕುಗಳು, ಕಡಲ ಉತ್ಪನ್ನಗಳು ಮತ್ತು ಪ್ಲಾಸ್ಟಿಕ್ ಕ್ಷೇತ್ರಗಳಿಗೆ ಹೆಚ್ಚಿನ ಲಾಭವಾಗಲಿದೆ. ನ್ಯೂಜಿಲೆಂಡಿನ ಉಣ್ಣೆ, ಕಲ್ಲಿದ್ದಲು, ಮರ ಮತ್ತು ಕೆಲವು ಹಣ್ಣುಗಳ ರಫ್ತಿಗೆ ಭಾರತದಲ್ಲಿ ಸುಲಭ ಪ್ರವೇಶ ಸಿಗಲಿದೆ.

ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಸುಮಾರು 20 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ (FDI) ಹರಿದುಬರುವ ನಿರೀಕ್ಷೆಯಿದೆ. ಭಾರತೀಯ ವೃತ್ತಿಪರರಿಗೆ (Skilled Professionals) ವಾರ್ಷಿಕವಾಗಿ 5,000 ತಾತ್ಕಾಲಿಕ ಉದ್ಯೋಗ ವೀಸಾಗಳನ್ನು ನೀಡಲು ನ್ಯೂಜಿಲೆಂಡ್ ಒಪ್ಪಿಕೊಂಡಿದೆ.
ಭಾರತದ ಕೃಷಿಕರ ಹಿತದೃಷ್ಟಿಯಿಂದ ಡೈರಿ ಉತ್ಪನ್ನಗಳು (ಹಾಲು, ಬೆಣ್ಣೆ, ಚೀಸ್), ಸಕ್ಕರೆ ಮತ್ತು ಖಾದ್ಯ ತೈಲಗಳಂತಹ ಸೂಕ್ಷ್ಮ ವಲಯಗಳನ್ನು ಈ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 5 ಶತಕೋಟಿ ಡಾಲರ್‌ಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಇದನ್ನೂ ಓದಿ: ಇದು ನನ್ನ ಕೊನೆಯ ರ‍್ಯಾಲಿ, ಫಲಿತಾಂಶದ ನಂತರ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ: ಪ್ರಧಾನಿ ಮೋದಿ
15 ವರ್ಷದ ಬಳಿಕ ಸಹಿ:
ಎರಡೂ ದೇಶಗಳು 2010 ರಲ್ಲಿ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಿದ್ದವು. ಒಂಬತ್ತು ಸುತ್ತಿನ ಮಾತುಕತೆಗಳ ನಂತರ 2015 ರಲ್ಲಿ ಅದು ಸ್ಥಗಿತಗೊಂಡಿತು. ನಂತರ ಮಾತುಕತೆಗಳು ಮಾರ್ಚ್ 2025 ರಲ್ಲಿ ಪುನರಾರಂಭಗೊಂಡು ಕಳೆದ ವರ್ಷ ಡಿಸೆಂಬರ್‌ನಲ್ಲಿಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು. ಇದು ಭಾರತದ ಅತ್ಯಂತ ವೇಗವಾಗಿ ಮುಕ್ತಾಯಗೊಂಡ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಒಂದಾಗಿದೆ.

ಜಾರಿ ಯಾವಾಗ?
ಸಹಿ ಹಾಕಲಾಗಿದ್ದರೂ ಈ ಒಪ್ಪಂದವು ತಕ್ಷಣವೇ ಜಾರಿಗೆ ಬರುವುದಿಲ್ಲ. ಈ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಂಸತ್ತು ಅನುಮತಿ ನೀಡಬೇಕಾಗುತ್ತದೆ. ಭಾರತದಲ್ಲಿ ಅಂತರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುವ ಮತ್ತು ಅವುಗಳನ್ನು ಅಂಗೀಕರಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದರೆ ಅದು ಜಾರಿಗೆ ಬರಲು ಅರ್ಹವಾಗುತ್ತದೆ. 2026 ರ ದ್ವಿತೀಯಾರ್ಧದಲ್ಲಿ ಎಫ್‌ಟಿಎ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಇದು ನನ್ನ ಸತ್ಯಾಗ್ರಹ – ಹಿಂದೆ ಸರಿಯಲ್ಲ ಎಂದು ಜಡ್ಜ್ ಹೇಳಿದ ಬೆನ್ನಲ್ಲೇ ವಿಚಾರಣೆಗೆ ಬರಲ್ಲ ಎಂದ ಕೇಜ್ರಿವಾಲ್
ಭಾರತಕ್ಕೆ ಏನು ಲಾಭ?
ಜವಳಿ ಮತ್ತು ಸಿದ್ಧ ಉಡುಪುಗಳು: ನ್ಯೂಜಿಲೆಂಡ್‌ಗೆ ಭಾರತದಿಂದ ರಫ್ತಾಗುವ ಬಟ್ಟೆಗಳು ಮತ್ತು ಗೃಹೋಪಯೋಗಿ ಜವಳಿಗಳ ಮೇಲೆ ಈಗ ಶೂನ್ಯ ಸುಂಕ ಇರುವುದರಿಂದ ಭಾರತೀಯ ರಫ್ತುದಾರರಿಗೆ ದೊಡ್ಡ ಮಾರುಕಟ್ಟೆ ಸಿಗಲಿದೆ.
ರತ್ನಗಳು ಮತ್ತು ಆಭರಣಗಳು: ಭಾರತೀಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಅಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಸುಂಕ ರದ್ದತಿಯಿಂದ ಇವುಗಳ ಬೆಲೆ ಸ್ಪರ್ಧಾತ್ಮಕವಾಗಲಿದೆ.
ಔಷಧೀಯ ಉತ್ಪನ್ನಗಳು: ಭಾರತದ ‘ಜೆನೆರಿಕ್’ ಔಷಧಗಳು ಮತ್ತು ಲಸಿಕೆಗಳಿಗೆ ನ್ಯೂಜಿಲೆಂಡ್‌ನಲ್ಲಿ ಸುಲಭ ಪ್ರವೇಶ ಸಿಗಲಿದ್ದು, ಅನುಮೋದನೆ ಪ್ರಕ್ರಿಯೆಯೂ ವೇಗವಾಗಲಿದೆ.
ಎಂಜಿನಿಯರಿಂಗ್ ಸರಕುಗಳು: ಯಂತ್ರೋಪಕರಣಗಳು, ಆಟೋ ಬಿಡಿಭಾಗಗಳು ಮತ್ತು ಕಬ್ಬಿಣದ ಉತ್ಪನ್ನಗಳು ಈ ಒಪ್ಪಂದದಿಂದ ಲಾಭ ಪಡೆಯಲಿವೆ.
ಚರ್ಮದ ವಸ್ತುಗಳು: ಭಾರತೀಯ ಚರ್ಮದ ಪಾದರಕ್ಷೆಗಳು, ಬ್ಯಾಗ್ ಮತ್ತು ಜಾಕೆಟ್‌ಗಳಿಗೆ ಸುಂಕ ವಿನಾಯಿತಿ ಸಿಗಲಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಸೇವೆಗಳು: ಕೇವಲ ಸರಕುಗಳಲ್ಲದೆ, ಭಾರತೀಯ ಐಟಿ ವೃತ್ತಿಪರರು ಮತ್ತು ನರ್ಸ್‌ಗಳಿಗೆ ವೀಸಾ ನಿಯಮಗಳಲ್ಲಿ ಸಡಿಲಿಕೆ ಇರುವುದರಿಂದ ಸೇವಾ ವಲಯಕ್ಕೂ ದೊಡ್ಡ ಲಾಭವಾಗಲಿದೆ.
PM @NarendraModi ji’s message on the landmark signing of the #IndiaNZFTA. 🇮🇳🤝🇳🇿 pic.twitter.com/fGfrjFz3gc
— Piyush Goyal (@PiyushGoyal) April 27, 2026
ನ್ಯೂಜಿಲೆಂಡ್‌ಗೆ ಏನು ಲಾಭ?
ಉಣ್ಣೆ: ನ್ಯೂಜಿಲೆಂಡ್ ಉಣ್ಣೆಯ ಪ್ರಮುಖ ರಫ್ತುದಾರ ದೇಶವಾಗಿದ್ದು, ಭಾರತದ ಜವಳಿ ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ಉಣ್ಣೆಯ ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ.
ಮರ ಮತ್ತು ಮರದ ಉತ್ಪನ್ನಗಳು: ಭಾರತದ ಪೀಠೋಪಕರಣ ಮತ್ತು ನಿರ್ಮಾಣ ವಲಯಕ್ಕೆ ಅಗತ್ಯವಿರುವ ನ್ಯೂಜಿಲೆಂಡ್‌ನ ಪೈನ್ ಮರಗಳ ಆಮದಿನ ಮೇಲೆ ರಿಯಾಯಿತಿ ನೀಡಲಾಗಿದೆ.
ಹಣ್ಣುಗಳು: ನ್ಯೂಜಿಲೆಂಡ್‌ನ ಪ್ರಸಿದ್ಧ ಕಿವಿ ಹಣ್ಣು (Kiwi) ಮತ್ತು ಸೇಬುಗಳ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಇಳಿಸಲಾಗಿದೆ.
ಕಲ್ಲಿದ್ದಲು ಮತ್ತು ಖನಿಜಗಳು: ಕೈಗಾರಿಕಾ ಬಳಕೆಗೆ ಅಗತ್ಯವಿರುವ ನ್ಯೂಜಿಲೆಂಡ್‌ನ ಉತ್ತಮ ಗುಣಮಟ್ಟದ ಕಲ್ಲಿದ್ದಲು ಈಗ ಕಡಿಮೆ ಬೆಲೆಗೆ ಸಿಗಲಿದೆ.
ವೈನ್: ಪ್ರೀಮಿಯಂ ಗುಣಮಟ್ಟದ ನ್ಯೂಜಿಲೆಂಡ್ ವೈನ್‌ಗಳ ಮೇಲೆ ಸೀಮಿತ ಪ್ರಮಾಣದಲ್ಲಿ ಸುಂಕ ಕಡಿತ ಮಾಡಲಾಗಿದೆ.

