ಕ್ಯಾಲಿಫೋರ್ನಿಯಾ: ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ಮೂಡಿಸಿರುವ ಮರ್ಸಿನರಿ ಸ್ಪೈವೇರ್ (Mercenary Spyware) ದಾಳಿಯ ಸುಳಿಗೆ ಸಿಲುಕಿರುವ ಸಾಧ್ಯತೆಯಿರುವ ಗ್ರಾಹಕರಿಗೆ ತಂತ್ರಜ್ಞಾನ ದೈತ್ಯ ಸಂಸ್ಥೆ ಆಪಲ್ (Apple) ಭದ್ರತಾ ಎಚ್ಚರಿಕೆ (Threat Notification) ರವಾನಿಸಿದೆ. ವಿಶ್ವದ 110 ದೇಶಗಳ ಐಫೋನ್ ಬಳಕೆದಾರರಿಗೆ ಈ ತುರ್ತು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಸಂಸ್ಥೆ ಅಧಿಕೃತವಾಗಿ ದೃಢಪಡಿಸಿದೆ.

ಪರದೆ ಮೇಲೆ ಫ್ಲ್ಯಾಶ್ ಆಗುತ್ತಿರುವ ಥ್ರೆಟ್ ನೋಟಿಫಿಕೇಶನ್ ಸಂದೇಶದ ಅರ್ಥವೇನು, ಇದು ಏಕೆ ಬರುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಬಳಕೆದಾರರು ಏನು ಮಾಡಬೇಕು ಎಂಬ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.
ಏನಿದು ಥ್ರೆಟ್ ನೋಟಿಫಿಕೇಶನ್?
ಆಪಲ್‌ನ ಥ್ರೆಟ್ ನೋಟಿಫಿಕೇಶನ್ ಕೇವಲ ಒಂದು ಸಾಮಾನ್ಯ ವೈರಸ್ ಅಥವಾ ಸೈಬರ್ ಕ್ರೈಮ್ ಎಚ್ಚರಿಕೆಯಲ್ಲ. ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅತ್ಯಾಧುನಿಕ ಸ್ಪೈವೇರ್ ದಾಳಿ ನಡೆಸಿದಾಗ ಮಾತ್ರ ಆಪಲ್ ಈ ಎಚ್ಚರಿಕೆಯನ್ನು ನೀಡುತ್ತದೆ.
ಈ ರೀತಿಯ ಸ್ಪೈವೇರ್ ದಾಳಿಗಳು ಅತ್ಯಂತ ಸಂಕೀರ್ಣವಾಗಿದ್ದು, ಇವುಗಳನ್ನು ರೂಪಿಸಲು ಮತ್ತು ನಿರ್ವಹಿಸಲು ಲಕ್ಷಾಂತರ ಡಾಲರ್ ವೆಚ್ಚವಾಗುತ್ತದೆ. ಇವು ಕಡಿಮೆ ಅವಧಿಗೆ ಸಕ್ರಿಯವಾಗಿರುವುದರಿಂದ ಇವುಗಳನ್ನು ಪತ್ತೆಹಚ್ಚುವುದು ಮತ್ತು ತಡೆಯುವುದು ಅತ್ಯಂತ ಕಷ್ಟಕರ.
ಗುರಿ ಯಾರು?
ಈ ಸ್ಪೈವೇರ್‌ಗಳು ಸಾಮಾನ್ಯ ಜನರನ್ನಲ್ಲದೆ ಪ್ರಮುಖವಾಗಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು, ರಾಜತಾಂತ್ರಿಕರು ಮತ್ತು ಉನ್ನತ ಮಟ್ಟದ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತವೆ. ಎನ್‌ಎಸ್‌ಒ ಗ್ರೂಪ್‌ನ ಕುಖ್ಯಾತ ‘ಪೆಗಾಸಸ್’ನಂತಹ ಮರ್ಸಿನರಿ ಸ್ಪೈವೇರ್‌ಗಳನ್ನು ಖಾಸಗಿ ಕಂಪನಿಗಳು ಸರ್ಕಾರಿ ಸಂಸ್ಥೆಗಳು ಅಥವಾ ರಹಸ್ಯ ಕಾರ್ಯಾಚರಣೆಗಳಿಗಾಗಿ ಅಭಿವೃದ್ಧಿಪಡಿಸುತ್ತವೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.

ನೋಟಿಫಿಕೇಶನ್ ಬಂದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಸಾಧನದಲ್ಲಿ ಈ ನೋಟಿಫಿಕೇಶನ್ ಬಂದರೆ ಗಾಬರಿಯಾಗುವ ಅಗತ್ಯವಿಲ್ಲ. ಆಪಲ್ ಸಾಧನಗಳಲ್ಲಿರುವ ‘ಲಾಕ್‌ಡೌನ್ ಮೋಡ್’ ಅನ್ನು ತಕ್ಷಣವೇ ಸಕ್ರಿಯಗೊಳಿಸಿ. ಇದು ಸೈಬರ್ ದಾಳಿಯ ವಿರುದ್ಧ ಸಾಧನಕ್ಕೆ ಅತ್ಯುನ್ನತ ಮಟ್ಟದ ರಕ್ಷಣಾ ಕವಚ ನೀಡುತ್ತದೆ. ನಿಮ್ಮ ಆಪಲ್ ಐಡಿ ಹಾಗೂ ಇತರೆ ಖಾತೆಗಳ ಪಾಸ್‌ವರ್ಡ್‌ಗಳನ್ನು ತಕ್ಷಣ ಬದಲಾಯಿಸಿ.
ಈ ಮುನ್ನೆಚ್ಚರಿಕೆ ಪಾಲಿಸಿ
ಬಹುತೇಕ ಸಾಮಾನ್ಯ ಬಳಕೆದಾರರು ಇಂತಹ ಸ್ಪೈವೇರ್ ದಾಳಿಗೆ ಒಳಗಾಗುವುದಿಲ್ಲವಾದರೂ, ಡಿಜಿಟಲ್ ಸುರಕ್ಷತೆಗಾಗಿ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅತ್ಯಗತ್ಯ:
ನಿಮ್ಮ ಮೊಬೈಲ್ ಮತ್ತು ಇತರ ಸಾಧನಗಳನ್ನು ಯಾವಾಗಲೂ ಇತ್ತೀಚಿನ ಓಎಸ್ (OS) ಮತ್ತು ಸೆಕ್ಯುರಿಟಿ ಪ್ಯಾಚ್‌ಗಳೊಂದಿಗೆ ಅಪ್‌ಡೇಟ್ ಮಾಡಿಕೊಳ್ಳಿ. ಡಿವೈಸ್‌ಗಳಿಗೆ ಬಲಿಷ್ಠ ಪಾಸ್‌ಕೋಡ್, ಫೇಸ್ ಐಡಿ ಅಥವಾ ಟಚ್ ಐಡಿ ಭದ್ರತೆ ಅಳವಡಿಸಿ.
ಆಪಲ್ ಖಾತೆಗೆ ‘ಟು-ಫ್ಯಾಕ್ಟರ್ ಅಥೆಂಟಿಕೇಶನ್’ (2FA) ಹಾಗೂ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ (Stolen Device Protection) ಸಕ್ರಿಯಗೊಳಿಸಿ. ಯಾವಾಗಲೂ ಅಧಿಕೃತ ಆ್ಯಪ್ ಸ್ಟೋರ್‌ನಿಂದಲೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಸಾಧ್ಯವಾದ ಕಡೆ ಪಾಸ್‌ಕೀ (Passkeys) ಬಳಸಿ.
ಅಪರಿಚಿತರಿಂದ ಬರುವ ಇಮೇಲ್, ಮೆಸೇಜ್ ಅಥವಾ ಲಿಂಕ್‌ಗಳು ಹಾಗೂ ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ ಅಥವಾ ಡೌನ್‌ಲೋಡ್ ಮಾಡಬೇಡಿ.
