ಮುಂಬೈ: ರೈಲಿನ ಎಸಿ ಬೋಗಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡೆಲ್ ಹಾಗೂ ವೆಬ್‌ಸಿರೀಸ್ ನಟಿ (Web Series Actress) ಅಂತರಾ ಬ್ಯಾನರ್ಜಿ (Antara Banerjee) (31) ಅವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 12ರಂದು ಅರಾವಳಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರ್‌ಪಿಎಫ್ ಸಿಬ್ಬಂದಿಯೊಂದಿಗೆ ನಟಿ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ನಟಿಯಿಂದಲೇ ಕಿರಿಕ್
ಪೊಲೀಸರ ಪ್ರಕಾರ, ಅಂತರಾ ಬ್ಯಾನರ್ಜಿ ಸೂರತ್‌ಗೆ ಶೂಟಿಂಗ್‌ಗಾಗಿ ತೆರಳುತ್ತಿದ್ದರು. ಆದರೆ ಅವರ ಬಳಿ ಸ್ಲೀಪರ್ ಕ್ಲಾಸ್ ಟಿಕೆಟ್ ಇದ್ದರೂ ಮೀಸಲಾದ ಎಸಿ ಕೋಚ್‌ಗೆ ತೆರಳಿದ್ದರು. ಮೀಸಲು ಸೀಟ್ ಖಾಲಿ ಮಾಡುವಂತೆ ಪ್ರಯಾಣಿಕರೊಬ್ಬರು ಕೇಳಿದಾಗ ಅಂತರಾ ನಿರಾಕರಿಸಿದ್ದು, ಬಳಿಕ ಟಿಕೆಟ್ ಕಲೆಕ್ಟರ್ ಹರಿಕೇಶ್ ತ್ರಿಪಾಠಿಗೆ ಮಾಹಿತಿ ನೀಡಲಾಗಿದೆ. ಟಿಕೆಟ್ ಕಲೆಕ್ಟರ್ ಆರ್‌ಪಿಎಫ್ (RPF) ಸಿಬ್ಬಂದಿಗೆ ವಿಷಯ ತಿಳಿಸಿದ್ದರು.

ಬೊರಿವಲಿ–ದಹಾನು ನಡುವಿನ ಮಾರ್ಗದಲ್ಲಿ ರಾತ್ರಿ ಸುಮಾರು 9.30 ರಿಂದ 10.50ರ ವೇಳೆಗೆ ಘಟನೆ ನಡೆದಿದೆ ಎನ್ನಲಾಗಿದೆ. ಆರ್‌ಪಿಎಫ್ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಯಾಮಿನಿಕಾಂತ್ ಮಿಶ್ರಾ ಹಾಗೂ ಕಾನ್‌ಸ್ಟೆಬಲ್ ರಾಜೇಶ್ ಕುಮಾರ್ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ. ಈ ವೇಳೆ ಅಂತರಾ ಬ್ಯಾನರ್ಜಿ ಅಧಿಕಾರಿಗಳಿಗೆ ನಿಂದಿಸಿ, ಹಿಂಸಾತ್ಮಕವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ನಟಿ ಆರ್‌ಪಿಎಫ್ ಸಿಬ್ಬಂದಿ ಬಟ್ಟೆ ಬಿಚ್ಚಿ, ರೇಜರ್ ಬ್ಲೇಡ್‌ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮಿಶ್ರಾ ಗಾಯಗೊಂಡಿದ್ದು, ಅಂತರಾ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಎಸಿ ಕೋಚ್‌ನ ಬಾಗಿಲುಗಳನ್ನ ಬಂದ್ ಮಾಡಿದ್ದಾರೆ. ಬಳಿಕ ಅಂತರಾ ಗಾಜು ಒಡೆದು ರೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೊನೆಗೆ ರೈಲು ದಹಾನು ನಿಲ್ದಾಣದಲ್ಲಿ ತಲುಪಿದ ಬಳಿಕ ಆಕೆಯನ್ನ ಕೆಳಗೆ ಇಳಿದಿ ರೈಲ್ವೆ ಪೊಲೀಸರಿಗೆ (GRP) ಒಪ್ಪಿಸಲಾಗಿದೆ. ಮರುದಿನ ಬೆಳಗ್ಗೆ ಬೊರಿವಲಿ ರೈಲ್ವೆ ಪೊಲೀಸರು ಅಂತರಾಳನ್ನ ಬಂಧಿಸಿದ್ದಾರೆ.

ಹಲ್ಲೆಯ ವೇಳೆ ತನ್ನ ಸಮವಸ್ತ್ರ ಹಾಗೂ ಮೊಬೈಲ್ ಫೋನ್‌ಗೂ ಹಾನಿಯಾಗಿದೆ ಎಂದು ಆರ್‌ಪಿಎಫ್ ಅಧಿಕಾರಿ ಮಿಶ್ರಾ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯಿಂದ ಕೋಚ್‌ನಲ್ಲಿದ್ದ ಇತರ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು ಎನ್ನಲಾಗಿದೆ.
ಆಗಸ್ಟ್ 13ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ, ಗಂಭೀರ ಗಾಯಕ್ಕೆ ಕಾರಣವಾಗುವುದು ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪ ಸೇರಿದಂತೆ ಹಲವು ಪ್ರಕರಣಗಳನ್ನ ದಾಖಲಿಸಲಾಗಿದೆ. ನಂತರ ಅಂತರಾ ಬ್ಯಾನರ್ಜಿ ಅವರಿಗೆ ನೋಟಿಸ್ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
