– ಪ್ರತಿಭಟನಾಕಾರರ ಮನವೊಲಿಸುವಲ್ಲಿ ಹನೂರು ಶಾಸಕ ಮಂಜುನಾಥ್ ಯಶಸ್ವಿ

ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ಅರಣ್ಯಾಧಿಕಾರಿಗಳಿಂದ ಮೂವರ ಎನ್‌ಕೌಂಟರ್ (Poachers Encounter) ಖಂಡಿಸಿ ಹನೂರಿನಲ್ಲಿ (Hanur) ನಡೆಯುತ್ತಿದ್ದ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಮೃತರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಉದ್ಯೋಗದ ಭರವಸೆ ನೀಡುವ ಮೂಲಕ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಹನೂರು ಶಾಸಕ ಮಂಜುನಾಥ್ (Manjunath) ಯಶಸ್ವಿಯಾಗಿದ್ದಾರೆ.
ಮೃತರ ಕುಟುಂಬಸ್ಥರು, ಚರ್ಚ್ ಫಾದರ್ ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ ಶಾಸಕ ಮಂಜುನಾಥ್ ಸಂಧಾನ ಸಭೆ ನಡೆಸಿದರು. ಮೃತಪಟ್ಟ ಮೂವರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ, ವೈಯಕ್ತಿಕವಾಗಿ ತಲಾ 10 ಲಕ್ಷ ರೂ. ಪರಿಹಾರದ ಭರವಸೆಯನ್ನು ಶಾಸಕರು ನೀಡಿದರು. ಮೃತರ ಅಂತ್ಯಸಂಸ್ಕಾರದ ವೆಚ್ಚ ಭರಿಸುವುದು, ಮೃತರ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ ನೋಡಿಕೊಳ್ಳುವ ಭರವಸೆಯನ್ನೂ ನೀಡಿದರು. ಇದನ್ನೂ ಓದಿ: ಅರಣ್ಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ, ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ಪರಿಹಾರ: ಶಾಸಕ ಮಂಜುನಾಥ್
ಎನ್‌ಕೌಂಟರ್ ಮಾಡಿದ ಅರಣ್ಯಾಧಿಕಾರಿಗಳ ಅಮಾನತಿಗೆ ಕ್ರಮ ವಹಿಸಲಾಗುವುದು. ಸದ್ಯ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗದವರ ವರ್ಗಾವಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕರು ತಿಳಿಸಿದರು.
ಭರವಸೆ ಬೆನ್ನಲ್ಲೇ ಪ್ರತಿಭಟನಾಕಾರರು ಹೋರಾಟವನ್ನು ಕೈಬಿಟ್ಟಿದ್ದಾರೆ. ಹನೂರು ಸಹಜ ಸ್ಥಿತಿಗೆ ಮರಳಿದೆ. ವಾಹನ ಸಂಚಾರ ಸುಗಮವಾಗಿದೆ. ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ – ಮ್ಯಾಜಿಸ್ಟ್ರೇಟ್ ತನಿಖೆಗೆ ಡಿಸಿ ಆದೇಶ
