ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರನ್ನು ದಿಮಾಗಿ ನಕ್ಸಲರು(Dimagi Naxals) ಎಂಬುದಾಗಿ ಕರೆದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು(Kiren Rijiju) ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ(P Chidambaram) ಸೇರಿದಂತೆ ವಿಪಕ್ಷ ನಾಯಕರು ಈ ಕುರಿತು ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ರಿಜಿಜು ಈ ವಿವರಣೆ ನೀಡಿದ್ದಾರೆ. ಕಿರಣ್ ರಿಜಿಜು ಅವರು ಎಕ್ಸ್ ಖಾತೆಯಲ್ಲಿ ‘ದಿಮಾಗಿ ನಕ್ಸಲ್’ ಪದದ ವ್ಯಾಖ್ಯಾನವನ್ನು ಹಂಚಿಕೊಂಡಿದ್ದಾರೆ.
ಮಾವೋವಾದಿಗಳನ್ನು ಬೆಂಬಲಿಸುವ ಮತ್ತು ಭಾರತದ ಸಂವಿಧಾನವನ್ನು ತಿರಸ್ಕರಿಸುವವರು. ಪ್ರತ್ಯೇಕತಾವಾದಿಗಳೊಂದಿಗೆ ನಿಲ್ಲುವ ಹಾಗೂ ಸಂವಿಧಾನದ 370ನೇ ವಿಧಿಯನ್ನು ಬೆಂಬಲಿಸುವವರು. ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗದಿಂದ ಪ್ರತ್ಯೇಕಿಸಲು ಚಿಕನ್ ನೆಕ್ (ಸಿಲಿಗುರಿ ಕಾರಿಡಾರ್) ಕತ್ತರಿಸಲು ಕರೆ ನೀಡುವವರು ದಿಮಾಗಿ ನಕ್ಸಲರು ಎಂದು ರಿಜಿಜು ವ್ಯಾಖ್ಯಾನಿಸಿದ್ದಾರೆ.
Only those who support these kind of people are called “Dimagi Naxals”. pic.twitter.com/Gtcmj7rLfL
— Kiren Rijiju (@KirenRijiju) August 16, 2026
ರಿಜಿಜು ಅವರು 2020 ರ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಶಾರ್ಜಿಲ್ ಇಮಾಮ್ ಅಸ್ಸಾಂ ಮತ್ತು ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕಿಸಲು ಸಿಲುಗಿರಿ ಕಾರಿಡಾರ್ ಅನ್ನು ದಿಗ್ಬಂಧನ ಮಾಡಬೇಕು ಎಂದು ಕರೆ ನೀಡಿದ್ದ ವಿವಾದಾತ್ಮಕ ಭಾಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿಯ ಜನರನ್ನು ಬೆಂಬಲಿಸುವವರನ್ನು ಮಾತ್ರ ದಿಮಾಗಿ ನಕ್ಸಲರು ಎಂದು ಕರೆಯಲಾಗುತ್ತದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ನಾನೊಬ್ಬ ದಿಮಾಗಿ ನಕ್ಸಲ್, ನನಗೆ ಹೆಮ್ಮೆಯಿದೆ – ಮೋದಿಗೆ ಚಿದಂಬರಂ ತಿರುಗೇಟು
ಚಿಕನ್ ನೆಕ್ ಯಾವುದು?
ಪಶ್ಚಿಮ ಬಂಗಾಳದಲ್ಲಿರುವ ಸಿಲಿಗುರಿ ಕಾರಿಡಾರ್ ಅನ್ನು ಚಿಕನ್ ನೆಕ್ ಎಂದು ಕರೆಯಲಾಗುತ್ತದೆ. ಇದು ಕೇವಲ 22 ಕಿಲೋಮೀಟರ್‌ಗಳಷ್ಟು ಕಿರಿದಾದ ಭೂಭಾಗವಾಗಿದ್ದು, ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯದ ಎಂಟು ರಾಜ್ಯಗಳೊಂದಿಗೆ ಸಂಪರ್ಕಿಸುವ ಅತ್ಯಂತ ನಿರ್ಣಾಯಕ ಹಾಗೂ ಸಂವೇದನಾಶೀಲ ಆಯಕಟ್ಟಿನ ಹಾದಿಯಾಗಿದೆ. ಇದನ್ನೂ ಓದಿ: ಐವರಿಗೆ ನೀಡಿ ಉಮರ್ ಖಾಲಿದ್, ಶಾರ್ಜಿಲ್‌ಗೆ ಸುಪ್ರೀಂ ಜಾಮೀನು ನೀಡದ್ದು ಯಾಕೆ?
ಯಾರಿದು ದಿಮಾಗಿ ನಕ್ಸಲ್?
ದಿಮಾಗಿ ನಕ್ಸಲ್ ಎಂದರೆ ಬೌದ್ಧಿಕ ಅಥವಾ ವಿಚಾರವಾದಿ ನೆಲೆಗಟ್ಟಿನಲ್ಲಿ ನಕ್ಸಲ್ ಅಥವಾ ಮಾವೋವಾದಿ ಚಿಂತನೆಗಳನ್ನು ಹೊಂದಿರುವ ವ್ಯಕ್ತಿಗಳು ಎಂದರ್ಥ. ಕನ್ನಡದಲ್ಲಿ ಇದನ್ನು ‘ಬೌದ್ಧಿಕ ನಕ್ಸಲ್’ ಅಥವಾ ‘ಮನಸ್ಸಿನಲ್ಲಿ ನಕ್ಸಲ್ ಭಾವನೆ ಹೊಂದಿರುವ ವ್ಯಕ್ತಿಗಳುʼಎಂದು ಕರೆಯಬಹುದು. ಇದನ್ನೂ ಓದಿ: ಮಾಡೆಲ್‌ಗಳಾದ ಬುಡಕಟ್ಟು ಸುಂದರಿಯರು – ಮಾಜಿ ನಕ್ಸಲ್ ಮಹಿಳೆಯರ ರ‍್ಯಾಂಪ್ ವಾಕ್ ವೈರಲ್
