– ಸುವೇಂದು ಬಳಿಕ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕ ಟಾರ್ಗೆಟ್
– ಪಶ್ಚಿಮ ಬಂಗಾಳದಲ್ಲಿ ಹೆಚ್ಚಿದ ಚುನಾವಣೋತ್ತರ ಘರ್ಷಣೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೊತ್ತರ ಸಂಘರ್ಷಗಳು ಹೆಚ್ಚುತ್ತಿವೆ. ಬುಧವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಾತ್‌ರನ್ನ ಟಾರ್ಗೇಟ್ ಮಾಡಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲೆ ಬಿಜೆಪಿಯ ಮತ್ತೊಬ್ಬ ನಾಯಕ ಕೂದಲೆಳೆಯಲ್ಲಿ ಪಾರಾಗಿದ್ದು ಇದು ಬಂಗಾಳದಲ್ಲಿ ಉದ್ವಿಘ್ನತೆ ಹೆಚ್ಚುವಂತೆ ಮಾಡಿದೆ. ಈ ನಡುವೆ ಮಮತಾ ಸರ್ಕಾರವನ್ನ ವಜಾ ಮಾಡಿದ್ದು ಹೊಸ ಸರ್ಕಾರ ರಚನೆಗೆ ಇಂದು ಮಹತ್ವದ ಸಭೆ ನಡೆಯಲಿದೆ.
ಬುಧವಾರ ರಾತ್ರಿ ಮುಖ್ಯಮಂತ್ರಿ ರೇಸ್‌ನಲ್ಲಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ನಾಯಕ ಟಾರ್ಗೆಟ್ ಆಗಿದ್ದು, ಕೂದಳೆಯ ಅಂತರದಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಡಿಎಂಕೆ, ಅಣ್ಣಾಡಿಎಂಕೆ ಸರ್ಕಾರ ರಚಿಸಲು ಮುಂದಾದ್ರೆ ಟಿವಿಕೆಯ ಎಲ್ಲಾ 108 ಶಾಸಕರು ರಾಜೀನಾಮೆ!

ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕ ಮನೋಜ್ ಖಾನ್ ಮೇಲೆ ಕಚ್ಚಾ ಬಾಂಬ್ ದಾಳಿಗೆ ಯತ್ನಿಸಲಾಗಿದೆ. ಕೋಲ್ಕತ್ತಾ ಹತ್ತಿರ ಹೌರಾದ ಶಿಬ್‌ಪುರ ಕೊಳೆಗೇರಿಗಳಲ್ಲಿ ಉದ್ವಿಗ್ನತೆ ಕಚ್ಚಾ ಬಾಂಬ್ ಸ್ಫೋಟವಾಗಿದೆ. ಮನೋಜ್ ಖಾನ್ ಇದ್ದ ಪ್ರದೇಶದ ಬಳಿ ಕೆಲವು ದುಷ್ಕರ್ಮಿಗಳು ಅಂಗಡಿಗಳನ್ನ ಧ್ವಂಸಗೊಳಿಸಲು ಪ್ರಯತ್ನಿಸಿದ್ದಾರೆ. ಹಿಂಸಾತ್ಮಕ ಘರ್ಷಣೆಯಲ್ಲಿ ಹಲವು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕ ಮನೋಜ್ ಖಾನ್‌ಗೆ ಯಾವುದೇ ಹಾನಿಯಾಗಿಲ್ಲ. ಆದರೆ ಬಿಜೆಪಿ ನಾಯಕರು ಗುರಿಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸೋಲಿನ ಬಳಿಕ ಟಿಎಂಸಿ ರಕ್ತ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಸುವೇಂದು ಪಿಎ ಹಂತಕರ ಪತ್ತೆಗೆ ತಂಡ ರಚನೆ
ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತನನ್ನ ಕೊಂದ ಹಂತಕರನ್ನ ಪತ್ತೆಹಚ್ಚಲು ಪೊಲೀಸರು ಹಲವು ತಂಡಗಳನ್ನ ರಚಿಸಿದ್ದಾರೆ. ಈ ನಡುವೆ, ಉತ್ತರ 24 ಪರಗಣ ಜಿಲ್ಲೆಯ ಹಲವು ಭಾಗಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಆ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹತ್ಯೆಗೆ ಕಾರಣರಾದವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ ಬಳಿಕ ಮಧ್ಯಮಗ್ರಾಮ, ದೋಲ್ತಾಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ.

ದೀದಿ ಸರ್ಕಾರ ವಜಾಗೊಳಿಸಿದ ರಾಜ್ಯಪಾಲ
ರಾಜೀನಾಮೆ ನೀಡಲ್ಲ ಎಂದಿದ್ದ ಮಮತಾ ಬ್ಯಾನರ್ಜಿಗೆ ಗವರ್ನರ್ ಶಾಕ್ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಯನ್ನ ರಾಜ್ಯಪಾಲ ಆರ್.ಎನ್ ರವಿ ವಿಸರ್ಜಿಸಿದ್ದಾರೆ. ಇದರೊಂದಿಗೆ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕೃತ ತೆರೆ ಬಿದ್ದಿದೆ. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನ ತೊರೆಯಲು ನಿರಾಕರಿಸಿದ್ದ ಕಾರಣ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಮುಂಬೈನ ಒಂದೇ ಕುಟುಂಬದ ನಾಲ್ವರ ಸಾವಿಗೆ ಟ್ವಿಸ್ಟ್ – ಕಲ್ಲಂಗಡಿ ಹಣ್ಣಿನಲ್ಲಿತ್ತು ಇಲಿ ಪಾಷಾಣ
ಇಂದೇ ನೂತನ ಸಿಎಂ ಹೆಸರು ಘೋಷಣೆ?
ಈ ಎಲ್ಲ ಬೆಳವಣಿಗೆಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕೊಲ್ಕತ್ತಾಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಸುವೇಂದು ಅಧಿಕಾರಿ ಹಾಗೂ ದಿಲೀಪ್ ಘೋಷ್ ಹೆಸರು ಮುನ್ನಲೆಯಲ್ಲಿದೆ. ಇದರ ಹೊರತಾಗಿ ಅಚ್ಚರಿಯ ಆಯ್ಕೆ ಆಗಬಹುದು ಎನ್ನುವ ಕುತೂಹಲವೂ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ಬಂಗಾಳದಲ್ಲಿ ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುತ್ತಾ ಟಿವಿಕೆ? – ಬೊಮ್ಮಾಯಿ ಕೇಸ್‌ಗೂ ಸರ್ಕಾರ ರಚನೆಗೆ ಏನು ಸಂಬಂಧ?

