ಚೆನ್ನೈ: ದ್ರಾವಿಡಿಯನ್ ಪಕ್ಷಗಳಾದ ಡಿಎಂಕೆ ಅಥವಾ ಎಐಎಡಿಎಂಕೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂದಾದ್ರೆ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಎಲ್ಲಾ 108 ಶಾಸಕರು ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಡಿಎಂಕೆ ಮತ್ತು ಎಐಎಡಿಎಂಕೆ (AIADMK) ನಿರ್ಣಾಯಕ ಸಭೆಗಳನ್ನು ನಡೆಸಿದ ನಂತರ ಟಿವಿಕೆ ಶಾಸಕರು (TVK MLAs) ಈ ನಿರ್ಧಾರಕ್ಕೆ ಬಂದಿದ್ದಾರೆ. ಜನಪ್ರಿಯ ಮತಗಳನ್ನ ಪಡೆದ ಅತಿದೊಡ್ಡ ಪಕ್ಷವನ್ನು ಬಿಟ್ಟು ರಾಜ್ಯದಲ್ಲಿ ಸರ್ಕಾರ ರಚಿಸಲು ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದು ಟಿವಿಕೆ ಆರೋಪಿಸಿದೆ.

108 ಶಾಸಕ ಸ್ಥಾನಗಳನ್ನು ಪಡೆದ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊಮ್ಮಿದೆ. ಅತಿದೊಡ್ಡ ಪಕ್ಷವನ್ನು ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸಬೇಕು. ಆದ್ರೆ ಎರಡೂ ಬಾರಿ ಭೇಟಿಯಾದರು, ವಿಜಯ್ (Thalapathy vijay) ಅವರಿಗೆ ಹಕ್ಕು ಮಂಡಿಸಲು ಅವಕಾಶ ನಿರಾಕರಿಸಲಾಗಿದೆ. 118 ಶಾಸಕರ ಸಹಿ ಪಡೆದು ಬರುವಂತೆ ಹೇಳಿ ಕಳಿಸಿದ್ದಾರೆ. ಒಂದು ವೇಳೆ ಎರಡೂ ದ್ರಾವೀಡ ಪಕ್ಷಗಳು ಸರ್ಕಾರ ರಚಿಸಲು ಮುಂದಾದ್ರೆ, ಟಿವಿಕೆ ಎಲ್ಲಾ ಶಾಸಕರು ರಾಜೀನಾಮೆ ಕೊಡೋಣ ಅಂತ ನಟ ವಿಜಯ್ ಕೂಡ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ಲೋಕಭವನದಲ್ಲಿ 2ನೇ ಬಾರಿಗೆ ರಾಜ್ಯಪಾಲರನ್ನ ಭೇಟಿಯಾಗಿದ್ದ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದರು. ಇದಕ್ಕೆ ಒಪ್ಪದ ರಾಜ್ಯಪಾಲರು, 118 ಶಾಸಕರ ಸಹಿ ತನ್ನಿ, ಬಹುಮತ ಸಾಬೀತುಪಡಿಸಿದ ಬಳಿಕ ಪ್ರಮಾಣವಚನ ಸ್ವೀಕರಿಸಿ ಎಂದು ಹೇಳಿ ವಾಪಸ್ ಕಳಿಸಿದ್ದರು.
ಡಿಎಂಕೆಗೆ ಸರ್ಕಾರ ರಚಿಸುವ ಪ್ಲ್ಯಾನ್ ಇದೆಯೇ?
ಟಿವಿಕೆ ಬಹುಮತ ಈವರೆಗೆ ಸಾಬೀತುಪಡಿಸದ ಹಿನ್ನೆಲೆ ಡಿಎಂಕೆ ಪರ್ಯಾಯ ಸರ್ಕಾರ ರಚನೆಗೆ ಮುಂದಾಗಿದೆ ಎಂದು ಹೇಳಲಾಗ್ತಿದೆ. ಗುರುವಾರ (ಮೇ 7) ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ನಿರ್ಣಾಯಕ ಸಭೆ ನಡೆಸಲಾಗಿದೆ. ಇತ್ತ ಮತ್ತೊಂದು ಕಡೆ ಡಿಎಂಕೆ ಬಾಹ್ಯ ಬೆಂಬಲದೊಂದಿಗೆ ಅಣ್ಣಾಡಿಎಂಕೆ ಕೂಡ ಅಧಿಕಾರಕ್ಕೇರಲು ಹವಣಿಸುತ್ತಿದೆ ಎನ್ನುವತ್ತಿವೆ ವರದಿಗಳು.

