ನ್ಯೂಯಾರ್ಕ್: FIFA ವಿಶ್ವಕಪ್‌ನಿಂದ ಅರ್ಜೆಂಟೀನಾ (Argentina) ತಂಡವನ್ನು ಬ್ಯಾನ್ ಮಾಡಬೇಕೆಂದು ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನ ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ಬರೆಯುವ ಸಾಧ್ಯತೆ ಇದೆ.
2026ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತನ್ನ ಆಟಗಳ ಉದ್ದಕ್ಕೂ ವಿವಾದಗಳ ಸರಮಾಲೆಯನ್ನೇ ಹೊತ್ತುಕೊಂಡು ಬಂದಿತು. ಜೊತೆಗೆ ಫಿಫಾ ದಕ್ಷಿಣ ಅಮೆರಿಕನ್ನರ ಪರವಾಗಿ ಒಲವು ತೋರಿದೆ ಎಂಬ ಆರೋಪಗಳು ಕೇಳಿಬಂದವು. ಫೈನಲ್ ಪಂದ್ಯದಲ್ಲಂತೂ ಅರ್ಜೆಂಟೀನಾ ಆಟಗಾರರ ವರ್ತನೆಯು ತಂಡದ ಖ್ಯಾತಿಯನ್ನು ಮತ್ತಷ್ಟು ಹಾನಿಗೊಳಿಸಿತು. ಈ ಎಲ್ಲಾ ಕಾರಣಗಳಿಂದ ತಂಡದ ವಿರುದ್ಧ ಜಾಗತಿಕವಾಗಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದನ್ನೂ ಓದಿ: ಫೈನಲ್ ಬಳಿಕ ಮೈದಾನದಲ್ಲೇ ಕಿತ್ತಾಟ – ಸ್ಪೇನ್ ಆಟಗಾರನ ಕುತ್ತಿಗೆ ಹಿಡಿದ ಪರೆಡೆಸ್‌ಗೆ ರೆಡ್ ಕಾರ್ಡ್
ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ವಿರುದ್ಧ ಜಾಗತಿಕವಾಗಿ ಈಗಾಗಲೇ 2.3 ಕೋಟಿಗಿಂತಲೂ ಹೆಚ್ಚು ಡಿಜಿಟಲ್ ಸಹಿ ಸಂಗ್ರಹ ಆಗಿದೆ. ಇದು ಗಿನ್ನಿಸ್ ವಿಶ್ವದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ. ಜಗತ್ತಿನ ಇತಿಹಾಸದಲ್ಲೇ ಅತಿ ಹೆಚ್ಚು ಸಹಿ ಸಂಗ್ರಹ ಅಭಿಯಾನಗಳಲ್ಲಿ ಇದು ಕೂಡ ಒಂದಾಗಿದೆ.
ಹಲವಾರು ಯುರೋಪಿಯನ್ ಮಾಧ್ಯಮಗಳು ಪ್ರಕಟಿಸಿದ ವರದಿಗಳ ಪ್ರಕಾರ, ಸಹಿ ಸಂಗ್ರಹ ಅಭಿಯಾನಕ್ಕೆ ‘ಅರ್ಜೆಂಟೀನಾ ಔಟ್’ ಎಂದು ಹೆಸರಿಡಲಾಗಿದೆ. ಸುಮಾರು 170 ದೇಶಗಳಿಂದ 23,316,108 ಸಹಿಗಳನ್ನು ಪಡೆದುಕೊಂಡಿದೆ. 5 ಮಿಲಿಯನ್ ಸಹಿ ಸಂಗ್ರಹ ಗುರಿಯನ್ನು ಹೊಂದಲಾಗಿತ್ತು. ಆದರೆ, ಅದಕ್ಕೂ ಮೀರಿ ಹೋಗಿದೆ.
ಅರ್ಜೆಂಟೀನಾ 0-1 ಅಂತರದಿಂದ ಸ್ಪೇನ್ ವಿರುದ್ಧ ಫೈನಲ್‌ನಲ್ಲಿ ಸೋತ ನಂತರ, ಸಹಿ ಸಂಗ್ರಹ ಅಭಿಯಾನದ ರೂವಾರಿ, ʼಫಿಫಾ ನಮ್ಮನ್ನು ನಿರ್ಲಕ್ಷಿಸಿತು. ಆದರೆ ಸ್ಪೇನ್ ತನ್ನ ಭರವಸೆಯನ್ನು ಉಳಿಸಿಕೊಂಡಿತು. ಧನ್ಯವಾದಗಳು ಸ್ಪೇನ್ʼ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಮೂಲಕ ಅಭಿಯಾನವನ್ನು ಕೊನೆಗೊಳಿಸಿದ್ದಾರೆ. ಇದನ್ನೂ ಓದಿ: FIFA World Cup Final| ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ವಿಶ್ವ ಫುಟ್‌ಬಾಲ್ ಕಿರೀಟ
ಅತಿ ಹೆಚ್ಚು ಸಹಿ ಮಾಡಲಾದ ಅರ್ಜಿಯ ಅಧಿಕೃತ ದಾಖಲೆಯು ಜುಬಿಲಿ 2000 ಚಳವಳಿಗೆ ಸೇರಿದ್ದಾಗಿದೆ. ಅದು 24,319,181 ಸಹಿಗಳನ್ನು ಸಂಗ್ರಹಿಸಿದೆ. ಈಗಿನ ಅರ್ಜಿಯನ್ನು ಇನ್ನೂ ಒಂದೆರಡು ದಿನಗಳವರೆಗೆ ಮುಂದುವರಿಸಿದ್ದರೆ, ಹಳೆಯ ದಾಖಲೆಯನ್ನು ಮುರಿಯುತ್ತಿತ್ತು.
