ಚೆನ್ನೈ: ತಮಿಳುನಾಡು ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(TVK) ಪಕ್ಷವು ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡುತ್ತಿಲ್ಲ ಎಂದು ಆರೋಪಿಸಿ ಟಿವಿಕೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಯೋಜಿಸುತ್ತಿದೆ.
ಬಹುಮತವನ್ನು ರಾಜಭವನದಲ್ಲಿ ಸಾಬೀತುಪಡಿಸುವ ಬದಲು ವಿಧಾನಸಭೆಯಲ್ಲೇ (Floor Test) ಸಾಬೀತುಪಡಿಸಬೇಕು ಎಂಬ ಸುಪ್ರೀಂ ಕೋರ್ಟ್ ಬೊಮ್ಮಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಐತಿಹಾಸಿಕ ತೀರ್ಪನ್ನು (S.R. Bommai Case) ಆಧಾರವಾಗಿಟ್ಟುಕೊಂಡು ಟಿವಿಕೆ ವಾದ ಮಂಡಿಸುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ ವಿಜಯ್ (Vijay) ಅವರು ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರೊಂದಿಗೆ ಕಾನೂನು ತಜ್ಞರ ಸಮಾಲೋಚನೆ ನಡೆಸಿದ್ದು, ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಶೀಘ್ರದಲ್ಲೇ ಅರ್ಜಿ ಸಲ್ಲಿಸಬಹುದು ಎನ್ನಲಾಗುತ್ತಿದೆ.
ಸದ್ಯಕ್ಕೆ ಟಿವಿಕೆ ಪರವಾಗಿ ಯಾವುದೇ ಅಧಿಕೃತ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿಲ್ಲ. ಆದರೆ ರಾಜಕೀಯ ಬಿಕ್ಕಟ್ಟು ಮುಂದುವರಿದರೆ ಕಾನೂನು ಸಮರ ಅನಿವಾರ್ಯವಾಗಲಿದೆ ಎಂದು ಹೇಳಲಾಗುತ್ತಿದೆ
ರಾಜ್ಯಪಾಲರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ ಮತ್ತು ಬಹುಮತ ಸಾಬೀತಿಗೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂಬುದು ಟಿವಿಕೆ ಮತ್ತು ಕಾಂಗ್ರೆಸ್ ದೂರಿದೆ.
ಏನಿದು ಬೊಮ್ಮಾಯಿ ಪ್ರಕರಣ?
ಎಸ್.ಆರ್. ಬೊಮ್ಮಾಯಿಯವರು 1988ರಲ್ಲಿ ಕರ್ನಾಟಕದ (Karnataka) ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 1989ರ ಏಪ್ರಿಲ್‌ನಲ್ಲಿ ಜನತಾದಳದ 19 ಶಾಸಕರು ರಾಜ್ಯಪಾಲ ಪಿ. ವೆಂಕಟಸುಬ್ಬಯ್ಯ ಅವರಿಗೆ ಪತ್ರ ಬರೆದು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದರು.
ಬೊಮ್ಮಾಯಿಯವರು ತಮಗೆ ಬಹುಮತವಿದೆ ಎಂದು ಪ್ರತಿಪಾದಿಸಿ ಅದನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸಲು (Floor Test) ಅವಕಾಶ ಕೇಳಿದರು. ಆದರೆ ರಾಜ್ಯಪಾಲರು ಈ ಮನವಿಯನ್ನು ತಿರಸ್ಕರಿಸಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಕೇಂದ್ರಕ್ಕೆ ವರದಿ ನೀಡಿದರು. ಇದನ್ನೂ ಓದಿ: ಚೆನ್ನೈನಲ್ಲಿ ತಾಪಮಾನ ಹೆಚ್ಚಾಗಿದ್ದಕ್ಕೆ ಪುದುಚೇರಿಗೆ ಶಾಸಕರು ಶಿಫ್ಟ್ – ರೆಸಾರ್ಟ್ ರಾಜಕೀಯಕ್ಕೆ AIADMK ಸಮರ್ಥನೆ
ಈ ಪ್ರಕರಣದ ನಂತರ ಯಾವುದೇ ಸರ್ಕಾರದ ಬಹುಮತ ರಾಜ್ಯಪಾಲರ ರಾಜಭವನದಲ್ಲಿ ನಿರ್ಧರಿಸುವಂತಿಲ್ಲ. ಅದು ಕೇವಲ ವಿಧಾನಸಭೆಯ ಅಂಗಳದಲ್ಲೇ (Floor Test) ನಿರ್ಧಾರವಾಗಬೇಕು ಎಂಬ ನಿಯಮ ಜಾರಿಗೆ ಬಂತು. ಈ ತೀರ್ಪಿನಿಂದಾಗಿ ಕೇಂದ್ರ ಸರ್ಕಾರವು ತನಗೆ ಇಷ್ಟ ಬಂದಂತೆ ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವ ಪದ್ಧತಿಗೆ ಕಡಿವಾಣ ಬಿತ್ತು.
ಟಿವಿಕೆ ವಾದ ಏನು?
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು 118 ಶಾಸಕರ ಸಹಿ ಇರುವ ಪತ್ರವನ್ನೇ ಕೇಳುತ್ತಿರುವುದು ಸಂವಿಧಾನಬಾಹಿರ ಎಂದು ಟಿವಿಕೆ ಪ್ರತಿಪಾದಿಸುತ್ತಿದೆ. ಬೊಮ್ಮಾಯಿ ತೀರ್ಪು ರಾಜ್ಯಪಾಲರ ಇಂತಹ ವಿವೇಚನಾ ಅಧಿಕಾರವನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಬಹುದು ಎಂದು ಸ್ಪಷ್ಟಪಡಿಸಿದೆ. ಯಾವುದೇ ಪಕ್ಷಕ್ಕೆ ಬಹುಮತವಿದೆಯೇ ಎಂದು ನಿರ್ಧರಿಸುವ ಅಧಿಕಾರ ರಾಜ್ಯಪಾಲರ ಖಾಸಗಿ ಅಭಿಪ್ರಾಯಕ್ಕೆ ಸೇರಿದ್ದಲ್ಲ. ಅದನ್ನು ವಿಧಾನಸಭೆಯಲ್ಲೇ (Floor Test) ಸಾಬೀತುಪಡಿಸಬೇಕು. ಹೀಗಾಗಿ ಬಹುಮತ ಸಾಬೀತಿಗೆ ಅನುಮತಿ ನೀಡಬೇಕು ಎಂದು ಟಿವಿಕೆ ಹೇಳುತ್ತಿದೆ.

