ಚೆನ್ನೈ: ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಬೆನ್ನಲ್ಲೇ ತಮಿಳುನಾಡಿನಲ್ಲಿ (Tamil Nadu) ರೆಸಾರ್ಟ್ ರಾಜಕೀಯ (Resort Politics) ಆರಂಭವಾಗಿದೆ.
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಶಾಸಕರ ಬೆಂಬಲದ ಪತ್ರ ನೀಡುವಂತೆ ವಿಜಯ್ (Vijay) ಅವರಿಗೆ ಸೂಚಿಸಿದ ಬೆನ್ನಲ್ಲೇ ರೆಸಾರ್ಟ್ ರಾಜಕೀಯ ಗರಿಗೆದರಿದೆ.
ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಭೀತಿಯಿಂದ AIADMK ತನ್ನ ಸುಮಾರು 25 ರಿಂದ 40ಕ್ಕೂ ಹೆಚ್ಚು ಶಾಸಕರನ್ನು ಪುದುಚೇರಿಯ(Puducherry) ಪೂರನ್‌ಕುಪ್ಪಂನಲ್ಲಿರುವ ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.
ಮೈತ್ರಿಕೂಟದ ಕುರಿತಾದ ಊಹಾಪೋಹಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಎಐಎಡಿಎಂಕೆ ನಾಯಕ ಅನ್ಬಳಗನ್ ಪ್ರತಿಕ್ರಿಯಿಸಿ, ಚೆನ್ನೈನಲ್ಲಿ ತಾಪಮಾನ ತುಂಬಾ ಹೆಚ್ಚಿರುವುದರಿಂದ ಪಕ್ಷದ ಶಾಸಕರು ಪುದುಚೇರಿಯಲ್ಲಿ ತಂಗಿದ್ದಾರೆ ಎಂದು ರೆಸಾರ್ಟ್‌ಗೆ ತೆರಳಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಪುದುಚೇರಿಯ ‘ದಿ ಶೋರ್ ತ್ರಿಶ್ವಂ’ (The Shore Trishvam) ಸೇರಿದಂತೆ ಪ್ರಮುಖ ರೆಸಾರ್ಟ್‌ಗಳಲ್ಲಿ ಶಾಸಕರಿಗೆ ಸುಮಾರು 74 ಕೊಠಡಿಗಳನ್ನು ಮೇ 13 ರವರೆಗೆ ಕಾಯ್ದಿರಿಸಲಾಗಿದೆ. ಶಾಸಕರ ರಕ್ಷಣೆಗಾಗಿ ಪುದುಚೇರಿ ಪೊಲೀಸರನ್ನು ನಿಯೋಜಿಸಲಾಗಿದೆ.
VIDEO | Puducherry: “AIADMK MLAs from Tamil Nadu are staying here in Puducherry as Chennai is too hot and the weather here is better”, says AIADMK leader Anbalagan.
(Full video available on PTI Videos – https://t.co/n147TvrpG7) pic.twitter.com/MHOLzZD8rC
— Press Trust of India (@PTI_News) May 7, 2026
234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ (5 ಸ್ಥಾನ) ಬೆಂಬಲದೊಂದಿಗೆ 113 ತಲುಪಿದೆ. ಆದರೆ ಸರ್ಕಾರ ರಚಿಸಲು ಇನ್ನೂ 5 ಶಾಸಕರ ಬೆಂಬಲದ ಅವಶ್ಯಕತೆಯಿದೆ. ಇದನ್ನೂ ಓದಿ: 118 ಶಾಸಕರ ಸಹಿಯೊಂದಿಗೆ ಬನ್ನಿ, ಪದಗ್ರಹಣಕ್ಕೂ ಮುನ್ನ ಬಹುಮತ ಸಾಬೀತುಪಡಿಸಿ – ವಿಜಯ್ ವಾದ ಒಪ್ಪದ ಗವರ್ನರ್
ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಅಥವಾ ಪ್ರಮುಖ ಖಾತೆಗಳನ್ನು ನೀಡಬೇಕು ಎಂಬ ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಮಧ್ಯೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ಸದ್ಯಕ್ಕೆ ಟಿವಿಕೆಗೆ ಬೆಂಬಲ ನೀಡಲು ಸಮ್ಮತಿಸಿಲ್ಲ ಎಂದು ತಿಳಿದುಬಂದಿದೆ.
ಇನ್ನೊಂದು ಕಡೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ TVK ತನ್ನ 108 ಶಾಸಕರನ್ನು ಒಗ್ಗಟ್ಟಾಗಿ ಇರಿಸಲು ಮಾಮಲ್ಲಾಪುರಂ ಸಮೀಪದ ಐಷಾರಾಮಿ ರೆಸಾರ್ಟ್‌ನಲ್ಲಿ ಉಳಿಸಿದೆ.

