118 ಶಾಸಕರ ಸಹಿಯೊಂದಿಗೆ ಬನ್ನಿ, ಪದಗ್ರಹಣಕ್ಕೂ ಮುನ್ನ ಬಹುಮತ ಸಾಬೀತುಪಡಿಸಿ – ವಿಜಯ್‌ ವಾದ ಒಪ್ಪದ ಗವರ್ನರ್‌

3 Min Read

– ಟಿವಿಕೆ ಬೆಂಬಲಕ್ಕೆ ನಿಂತ ಸಿಪಿಐ

ಚೆನ್ನೈ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊಮ್ಮಿರುವ ಟಿವಿಕೆ ಸರ್ಕಾರ ರಚಿಸಲು ಅಗತ್ಯ ಸಂಖ್ಯಾಬಲ ಹೊಂದಿದೆ ಎಂಬುದನ್ನ ಮನವರಿಕೆ ಮಾಡಲು ನಟ ವಿಜಯ್‌ ಹೆಣಗಾಡುತ್ತಿದ್ದಾರೆ. ಇಂದು ಬೆಳಗ್ಗೆ ರಾಜ್ಯಪಾಲ ಆರ್‌. ವಿ ಅರ್ಲೇಕರ್‌ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಲೋಕಭವನದಲ್ಲಿ ರಾಜ್ಯಪಾಲರನ್ನ ಭೇಟಿಯಾದ ವಿಜಯ್‌ ಪದಗ್ರಹಣಕ್ಕೆ ಅವಕಾಶ ಕೇಳಿದ್ದಾರೆ. ಮೊದಲು ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ. ಆದ್ರೆ ವಿಜಯ್‌ ಅವರ ವಾದ ಒಪ್ಪದ ಗವರ್ನರ್‌ 118 ಶಾಸಕರ ಸಹಿಯೊಂದಿಗೆ ಬನ್ನಿ ಅಂತ ಹೇಳಿ 2ನೇ ದಿನವು ವಾಪಸ್‌ ಕಳಿಸಿದ್ದಾರೆ.

ಕಾನೂನು ಏನು ಹೇಳುತ್ತೆ?
* ರಾಜ್ಯಪಾಲರು ಬಹುಮತ ಪಡೆದ ಪಕ್ಷಕ್ಕೆ ಮೊದಲು ಸರ್ಕಾರ ರಚನೆಗೆ ಅವಕಾಶ ನೀಡಬೇಕು
* ಒಂದು ವೇಳೆ ಬಹುಮತ ಬರದಿದ್ದರೆ, ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಬಹುದು
* ವಿಧಾನಸಭೆಯಲ್ಲಿ ಯಾರು ಬಹುಮತ ಸಾಬೀತುಪಡಿಸಬಹುದು ಎಂದು ಯೋಚಿಸುವ ವಿವೇಚನಾ ಅಧಿಕಾರ ರಾಜ್ಯಪಾಲರಿಗೆ ಇರುತ್ತೆ
* ಆದರೆ ಎಸ್‌ಆರ್ ಬೊಮ್ಮಾಯಿ V/s ಕೇಂದ್ರ ಸರ್ಕಾರ ಪ್ರಕರಣದಲ್ಲಿ ಬಹುಮತದ ಪರೀಕ್ಷೆ ರಾಜಭವನದಲ್ಲಿ ಅಲ್ಲ, ವಿಧಾನಸಭೆಯಲ್ಲಿ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
* ರಾಮೇಶ್ವರ್ ಪ್ರಸಾದ್ V/s ಕೇಂದ್ರ ಸರ್ಕಾರ ಪ್ರಕರಣದಲ್ಲಿ ರಾಜ್ಯಪಾಲರು ಊಹೆಗಳ ಆಧಾರದಲ್ಲಿ ಸರ್ಕಾರ ರಚನೆ ತಡೆಯಬಾರದು ಎಂದು ಕೋರ್ಟ್ ಹೇಳಿದೆ
* ಶಿವರಾಜ್ ಸಿಂಗ್ ಚೌಹಾನ್ V/s ಮಧ್ಯಪ್ರದೇಶ ಸ್ಪೀಕರ್ ಪ್ರಕರಣದಲ್ಲಿ ಸಂಖ್ಯಾಬಲದ ಅನುಮಾನ ಇದ್ದರೆ ತ್ವರಿತ ಫ್ಲೋರ್ ಟೆಸ್ಟ್ ಅಗತ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಹೀಗಾಗೀ ಅತಿದೊಡ್ಡ ಪಕ್ಷವಾಗಿರುವುದೇ ಸರ್ಕಾರ ರಚನೆಗೆ ಖಚಿತ ಹಕ್ಕು ಅಲ್ಲ. ಆದರೆ ಸರ್ಕಾರ ರಚನೆಗೆ ಮೊದಲ ಅವಕಾಶ ಕೇಳುವ ಬಲವಾದ ರಾಜಕೀಯ-ಸಂವಿಧಾನಾತ್ಮಕ ಹಕ್ಕು ಇದೆ ರಾಜ್ಯಪಾಲರು ತಟಸ್ಥವಾಗಿ ಬಹುಮತ ಪರಿಶೀಲಿಸಬೇಕು ಅಂತಿಮವಾಗಿ ವಿಧಾನಸಭೆಯ ಫ್ಲೋರ್ ಟೆಸ್ಟ್ ಮೂಲಕವೇ ಆಗಬೇಕು ಎಂದು ಕಾನೂನು ಹೇಳುತ್ತದೆ.

ಕಾನೂನು ಸಲಹೆ ಪಡೆದ ಬಳಿಕ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡಬಹುದು ಒಂದು ವೇಳೆ ಅನುಮತಿ ನೀಡದಿದ್ದರೆ ವಿಜಯ್ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಮೊರೆ ಹೋಗಬಹುದು ಬಹುಮತ ಸಾಬೀತುಪಡಿಸಲು ಅವಕಾಶ ನಿರಾಕರಣೆ ಅಥಾವ ಸರ್ಕಾರ ರಚನೆಗೆ ಅವಕಾಶ ನೀಡದಿರುವುದು ಪ್ರಶ್ನೆ ಮಾಡಬಹುದು. ಈ ಹಿನ್ನಲೆ ವಿಜಯ್ ಕಾನೂನು ತಂಡ ಬಗ್ಗೆ ಪರಿಶೀಲನೆ ಮಾಡುತ್ತಿದೆ. ಹೀಗಾಗೀ ತಮಿಳುನಾಡು ರಾಜಕೀಯ ಒಂದೇರಡು ದಿನಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ರು ಅಚ್ಚರಿ ಇಲ್ಲ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಂದು (ಮೇ 7) ವಿಜಯ್ ತಮಿಳುನಾಡು ಸಿಎಂ ಆಗಿ ಪ್ರಮಾಣ ಸ್ವೀಕರಿಸಬೇಕಿತ್ತು. ಆದ್ರೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಕಾನೂನು ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲು ತಮಿಳುನಾಡು ರಾಜ್ಯಪಾಲರು ಮುಂದಾಗಿದ್ದಾರೆ.

ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದು ದೂರದ ಮಾತು ಎನ್ನಲಾಗ್ತಿದೆ. ಎರಡೂ ಪಕ್ಷಗಳು ಒಟ್ಟಿಗೆ ಸೇರಿದರೂ ಮ್ಯಾಜಿಕ್ ನಂಬರ್ ಸುಲಭವಲ್ಲ. ಇತರೆ ಪಕ್ಷಗಳ ಬೆಂಬಲ ಬೇಕಾಗುತ್ತದೆ. ಜನರ ತೀರ್ಪು ಧಿಕ್ಕರಿಸಿ ಸರ್ಕಾರ ರಚಿಸುವುದು ಸರಿಯಲ್ಲ ಎಂದು ಎರಡೂ ಪಕ್ಷದ ನಾಯಕರು ಭಾವಿಸಿದ್ದಾರೆ. ಸ್ಟಾಲಿನ್ ಕೂಡ ಇದೇ ಮಾತು ಹೇಳಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನ ಗೆದ್ದಿದೆ. ಬಹುಮತಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ. ವಿಜಯ್ ಅವರು ಚುನಾವಣೆಯಲ್ಲಿ ಗೆದ್ದ 2 ಕ್ಷೇತ್ರಗಳ ಪೈಕಿ ಒಂದನ್ನ ಬಿಟ್ಟುಕೊಡಲು ಸಜ್ಜಾಗಿರುವುದರಿಂದ, ಪಕ್ಷದ ಪರಿಣಾಮಕಾರಿ ಸಂಖ್ಯೆ 107 ಕ್ಕೆ ಇಳಿಯಲಿದೆ. ವಿಜಯ್ ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಎರಡೂ ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನ 5 ಶಾಸಕರ ಬೆಂಬಲ ಸಿಕ್ಕಿರುವುದರಿಂದ ಒಟ್ಟು ಸ್ಥಾನಗಳ ಸಂಖ್ಯೆ 112 ಆಗಲಿದೆ, ಇನ್ನೂ 6 ಸ್ಥಾನಗಳು ಬಹುಮತಕ್ಕೆ ಬೇಕಿದ್ದು, ವಿಜಯ್‌ ಮೌಖಿಕ ಬೆಂಬಲ ನೀಡಿದ್ದಾರೆಂದು ಹೇಳಿದ್ದಾರೆ. ಆದ್ರೆ ಬೆಂಬಲ ಪತ್ರವನ್ನು ಪ್ರಸ್ತುತಪಡಿಸುವಂತೆ ರಾಜ್ಯಪಾಲರು ಹೇಳಿದ್ದರಿಂದ ವಿಜಯ್‌ ಮತ್ತೊಂದು ಸುತ್ತಿನ ಕಸರತ್ತು ನಡೆಸಬೇಕಾಗಿದೆ.

ಟಿವಿಕೆ ಬೆಂಬಲಕ್ಕೆ ನಿಂತ ಸಿಪಿಐ
ಇನ್ನೂ ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಂದು ಕ್ಷಿಪ್ರ ಬೆಳವಣಿಗೆ ನಡೆದಿದೆ. ವಿಜಯ್ ಗೆ ವಿಶ್ವಾಸ ಮತ ಯಾಚನೆಗೆ ಅವಕಾಶ ಕೊಡುವಂತೆ ಕೋರಿ ಡಿಎಂಕೆ ಅಂಗ ಪಕ್ಷ ಸಿಪಿಐ ರಾಜ್ಯಪಾಲರಿಗೆ ಪತ್ರ ಬರೆದಿದೆ. 2 ಸ್ಥಾನ ಗೆದ್ದಿರುವ ವಿಸಿಕೆ ಪಕ್ಷ ಕೂಡಾ ವಿಜಯ್‌ ವಿಚಾರದಲ್ಲಿ ಸಾಫ್ಟ್ ಕಾರ್ನ್‌ ತೋರಿದೆ.

Share This Article