ಮಂಗಳೂರು: ಕಳೆದ 26 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ ಪವಾಡವೆಂಬಂತೆ ಮನೆಗೆ ವಾಪಸ್ ಬಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ (Dharmasthala) ಅಶೋಕನಗರದಲ್ಲಿ ನಡೆದಿದೆ.
ಸತೀಶ್ ಎಂಬಾತ ತನ್ನ 19ನೇ ವಯಸ್ಸಿನಲ್ಲಿ (2000ನೇ ಇಸವಿ) ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದ ಜೊತೆಗೆ ಮಹಾರಾಷ್ಟ್ರಕ್ಕೆ ಹೋಗಿದ್ದ. ಅಂದಿನಿಂದ 26 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಈತ ತನ್ನ ಊರು ಮತ್ತು ಮನೆಯವರನ್ನೆಲ್ಲಾ ಮರೆತುಬಿಟ್ಟಿದ್ದ. ಬಹಳ ದಿನಗಳ ಬಳಿಕ ಮಹಾರಾಷ್ಟ್ರದ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳದ ದೇವಸ್ಥಾನಕ್ಕೆ ಬಂದಾಗ ಈತನಿಗೆ ತನ್ನ ಬಾಲ್ಯದ ನೆನಪು ಮರುಕಳಿಸಿದೆ. ಈ ವೇಳೆ ಸರ್ಕಸ್ ನಡೆದಿದ್ದ ಜಾಗಕ್ಕೆ ಹೋದಾಗ ಇದೇ ತನ್ನ ಊರು ಎಂದು ಖಚಿತವಾಗಿದೆ. ಇದನ್ನೂ ಓದಿ: ಸಾಲದ ಹಣ ವಾಪಸ್ ಕೊಡುವುದಾಗಿ ಕರೆಸಿಕೊಂಡು ವೃದ್ಧೆಯ ಕೊಲೆ
ಸತೀಶ್‌ಗೆ ತನ್ನ ತಮ್ಮಂದಿರ ಹೆಸರು ನೆನಪಿದ್ದ ಕಾರಣ ಸುತ್ತಮುತ್ತಲಿನ ಅಂಗಡಿ ಹಾಗೂ ಜನರ ಬಳಿ ಮನೆಯ ವಿಳಾಸ ಕೇಳಿಕೊಂಡು ಅಂತಿಮವಾಗಿ ಕುಟುಂಬಸ್ಥರನ್ನು ಸೇರಿಕೊಂಡಿದ್ದಾನೆ.
ಸತೀಶ್ ತಾಯಿ ತನ್ನ ಮಗ ಮರಳಿ ಮನೆಗೆ ಬರಲೆಂದು ಧರ್ಮಸ್ಥಳ, ಕಟೀಲು, ಪಣೋಲಿಬೈಲ್‌ಗೆ ಹರಕೆ ಹೊತ್ತಿದ್ದರು. ಇತ್ತೀಚಿಗಷ್ಟೇ ಉಳಿದಿಬ್ಬರು ಮಕ್ಕಳ ಬಳಿ ಕಾಣೆಯಾಗಿರುವ ಸತೀಶ್‌ನನ್ನು ಹುಡುಕಿ ಕರೆತನ್ನಿ, ನಾನು ಸಾಯುವ ಮೊದಲು ನನ್ನ ಮಗನನ್ನು ನೋಡಬೇಕು ಎಂದು ಕಣ್ಣೀರಿಟ್ಟಿದ್ದರು. ಇದೀಗ ಕೊನೆಗೂ ತಾಯಿಯ ಹರಕೆ ಪವಾಡದ ರೀತಿಯಲ್ಲಿ ಫಲಿಸಿದೆ.
ಈತ ಮನೆ ಬಿಟ್ಟು ಹೋದಾಗ ಸತೀಶ್ ಆಗಿದ್ದ. ಆದರೆ, ವಾಪಸ್ ಬಂದಾಗ ಸಲೀಂ ಆಗಿದ್ದಾನೆ. ಮಹಾರಾಷ್ಟ್ರದಲ್ಲಿ ಸಲೀಂ ಅಬ್ದುಲ್ ಅನ್ಸಾರಿ ಆಗಿದ್ದ. ತಾಲೀಮಾ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಸಲೀಂ ದಂಪತಿಗೆ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಈತನಿಗೆ ಕನ್ನಡ, ತುಳು ಮರೆತು ಸಂಪೂರ್ಣ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಾನೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ನಟ ದರ್ಶನ್ ಬಂಧನವಾಗಿ ಇಂದಿಗೆ 2 ವರ್ಷ
