ನವದೆಹಲಿ: ಪೂರ್ವ ದೆಹಲಿಯ ವಿಶ್ವಾಸ್ ನಗರದಲ್ಲಿರುವ ಇ-ರಿಕ್ಷಾ (E-Rickshaw) ಪಾರ್ಕಿಂಗ್ ಮತ್ತು ಚಾರ್ಜಿಂಗ್ ಸೌಲಭ್ಯ (Charging Center) ಹೊಂದಿರುವ ಮೂರು ಮಹಡಿಯ ವಸತಿ ಕಟ್ಟಡದಲ್ಲಿ ಭಾನುವಾರ ಮುಂಜಾನೆ ಭಾರೀ ಅಗ್ನಿ ಅವಘಡ (Delhi Fire Tragedy) ಸಂಭವಿಸಿದೆ. ಈ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮುಂಜಾನೆ 4:15 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಕಟ್ಟಡದ ಮೇಲಿನ ಮಹಡಿಯಲ್ಲಿ ಸಿಲುಕಿದ್ದ ಆರು ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಹೆಡ್ಗೆವಾರ್ ಆಸ್ಪತ್ರೆಗೆ ಸಾಗಿಸಿದ್ದರು. ಅದರಲ್ಲಿ ನಾಲ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ. ಇದನ್ನೂ ಓದಿ: ಅರುಣಾಚಲದಲ್ಲಿ ಭಾರೀ ಅಗ್ನಿ ಅವಘಡ – ಮೂವರು ಅಪ್ರಾಪ್ತರು ಸೇರಿ 4 ಮಂದಿ ಸಜೀವ ದಹನ
ಇಬ್ಬರು ವ್ಯಕ್ತಿಗಳ ದೇಹದ ಸುಮಾರು 10% ರಷ್ಟು ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಶಹದಾರ ಉಪ ಪೊಲೀಸ್ ಆಯುಕ್ತ ರಾಜೇಂದ್ರ ಪ್ರಸಾದ್ ಮೀನಾ ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಗ್ರೌಂಡ್ ಫ್ಲೋರ್ನಲ್ಲಿದ್ದ ಇ ಚಾರ್ಜಿಂಗ್ ಸೆಂಟರ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೃತರ ಗುರುತು ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಸಂಭ್ರಮದ ನಡುವೆ ಪಟಾಕಿ, ಅಗ್ನಿ ಅವಘಡ; ದೇಶದ ಹಲವೆಡೆ 18 ಮಂದಿ ಸಾವು – ಎಲ್ಲೆಲ್ಲಿ ಏನಾಗಿದೆ?
