ರಾಂಚಿ: ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಭಕ್ತರ ವಾಹನವೊಂದು ಭೀಕರ ಅಪಘಾತಕ್ಕೀಡಾಗಿ (Accident) ನಾಲ್ವರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 13 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಜಾರ್ಖಂಡ್ನ(Jharkhand Highway) ರಾಮಗಢ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ರಾಂಚಿ-ಪಾಟ್ನಾ ರಾಷ್ಟ್ರೀಯ ಹೆದ್ದಾರಿ-33ರಲ್ಲಿ ನಸುಕಿನ ಜಾವ 2 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರೂ ಬಿಹಾರದ ನಳಂದ ಜಿಲ್ಲೆಯ ಜಂಘಾರೋ ಗ್ರಾಮದ ನಿವಾಸಿಗಳಾಗಿದ್ದು, ಸ್ಕಾರ್ಪಿಯೋ ವಾಹನದಲ್ಲಿ ಜಾರ್ಖಂಡ್ನ ಪ್ರಸಿದ್ಧ ಯಾತ್ರಾ ಸ್ಥಳ ರಾಜರಪ್ಪಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದರು. ವಾಹನದಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
ಅಪಘಾತದ ಸದ್ದು ಕೇಳುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು. ನಜ್ಜುಗುಜ್ಜಾಗಿದ್ದ ವಾಹನದಲ್ಲಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾದರು.
VIDEO | At least 13 people, including 3 women, killed in road accident in Jharkhand’s Ramgarh earlier today.
(Full video available on PTI Videos – https://t.co/d8jp61yd2p) https://t.co/3czp0Y7A56
— Press Trust of India (@PTI_News) November 29, 2026
13 ಮಂದಿಯನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಮೃತಪಟ್ಟಿದ್ದರು. ಗಾಯಗೊಂಡಿರುವ ಒಬ್ಬರಿಗೆ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗಾಯಾಳುವಿನ ಸ್ಥಿತಿ ಹೇಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಜಾರ್ಖಂಡ್ನಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ದೊಡ್ಡ ರಸ್ತೆ ದುರಂತ ಇದಾಗಿದೆ. ಕಳೆದ ನವೆಂಬರ್ 5ರಂದು ಖುಂಟಿ ಜಿಲ್ಲೆಯ ಕರ್ರಾ-ತೊರ್ಪಾ ಮುಖ್ಯರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು.
ಅಂದು ಮೋರಿಯ ಬಳಿ ಪೊದೆಯೊಳಗೆ ಬಿದ್ದಿದ್ದ ಸ್ಕೂಟರ್ ಸವಾರನನ್ನು ರಕ್ಷಿಸಲು ಮಹಿಳೆಯರು ಮತ್ತು ಮಕ್ಕಳು ಜಮಾಯಿಸಿದ್ದಾಗ, ವೇಗವಾಗಿ ಬಂದ 18 ಚಕ್ರಗಳ ಲಾರಿಯೊಂದು ಅವರ ಮೇಲೆ ಹರಿದಿತ್ತು. ಚಾಲಕ ಮದ್ಯದ ಅಮಲಿನಲ್ಲಿದ್ದ ಎಂದು ಆರೋಪಿಸಿದ್ದ ಗ್ರಾಮಸ್ಥರು, ಪರಿಹಾರ ಹಾಗೂ ಚಾಲಕನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆ ದುರ್ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು.
