ಭೋಪಾಲ್/ಮುಂಬೈ: ದೀಪಾವಳಿ ಹಬ್ಬದ ರಾತ್ರಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಗ್ನಿ ಅವಘಡಗಳಲ್ಲಿ ಆರು ಮಕ್ಕಳೂ ಸೇರಿದಂತೆ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಛಪಾರಾದ ಮಹಾವೀರ್ ವಾರ್ಡ್ನ ಜೈನ್ ಮೊಹಲ್ಲಾದಲ್ಲಿ ಆಭರಣ ವ್ಯಾಪಾರಿ ಕುಂದನ್ ಸೋನಿ ಅವರ ಮೂರು ಅಂತಸ್ತಿನ ಮನೆಯಲ್ಲಿ ರಾತ್ರಿ ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರು ನಿದ್ರಿಸುತ್ತಿದ್ದ ವೇಳೆ ಬೆಂಕಿ ವ್ಯಾಪಿಸಿದ್ದು, ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ.
ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಮನೆಯಲ್ಲಿ ಒಟ್ಟು 10 ಮಂದಿ ಇದ್ದು, ನಾಲ್ವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ದೀಪಾವಳಿಯಂದು ಪ್ರತ್ಯೇಕ ಅಗ್ನಿ ಅವಘಡ – 2 ತಿಂಗಳ ಮಗು ಸೇರಿ 12 ಮಂದಿ ಸಾವು
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬರಹಿ ಪಟ್ಟಣದಲ್ಲೂ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದೀಪಾವಳಿ ಪೂಜೆಯ ಬಳಿಕ ರಾತ್ರಿ 11:30ಕ್ಕೆ ಪೂರಣ್ ಅಗರವಾಲ್ ಮತ್ತು ರಿತೇಶ್ ಅಗರವಾಲ್ ಅವರಿಗೆ ಸೇರಿದ ಪಾತ್ರೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯ ಮೇಲಿದ್ದ ಮೂರು ಅಂತಸ್ತಿನ ಕಟ್ಟಡಕ್ಕೂ ಬೆಂಕಿ ವ್ಯಾಪಿಸಿದೆ. ಕಟ್ಟಡದಲ್ಲಿ ಮಲಗಿದ್ದ ಅಗರವಾಲ್ ಕುಟುಂಬದ ಆರು ಮಂದಿ ಹೊರಬರಲಾಗದೆ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ವೃದ್ಧರು, ಒಬ್ಬ ಮಹಿಳೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಓರ್ವ ಪುರುಷ ಮತ್ತು ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಯೇಡ್ಶಿ ಗ್ರಾಮದಲ್ಲೂ ಅಗ್ನಿ ದುರಂತ ಸಂಭವಿಸಿದೆ. ಗೋವಿಂದ ಕರಾಂಡೆ ಅವರಿಗೆ ಸೇರಿದ ಕಿರಾಣಿ ಅಂಗಡಿಯ ಮೇಲಿನ ಮಹಡಿಯಲ್ಲಿ ಕುಟುಂಬ ವಾಸವಿತ್ತು. ರಾತ್ರಿ ಸುಮಾರು 2:30ಕ್ಕೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಹಾಗೂ ಹೊಗೆ ಇಡೀ ಮನೆಗೆ ವ್ಯಾಪಿಸಿದೆ. ಉಸಿರುಗಟ್ಟಿ ಮತ್ತು ಸುಟ್ಟ ಗಾಯಗಳಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಕುಟುಂಬದ ಓರ್ವ ಸದಸ್ಯರು ಮಾತ್ರ ಬದುಕುಳಿದಿದ್ದಾರೆ.
ದೀಪಾವಳಿ ಸಂಭ್ರಮದ ವೇಳೆ ದೆಹಲಿಯೊಂದರಲ್ಲೇ 42 ಮಂದಿಗೆ ಸುಟ್ಟ ಗಾಯಗಳಾಗಿವೆ. 11 ಮಂದಿ ಸ್ಥಿತಿ ಗಂಭೀರವಾಗಿದೆ. ದೆಹಲಿಯಲ್ಲಿ 135, ಪುಣೆಯಲ್ಲಿ ಲಕ್ಷಿö್ಮ ಪೂಜೆ ವೇಳೆ 94 ಅಗ್ನಿ ಅವಘಡ ಸಂಭವಿಸಿದೆ. ಮುಂಬೈಯಲ್ಲಿ 142 ಅಗ್ನಿ ಅವಘಡದಲ್ಲಿ 137 ದೀಪಾವಳಿ ಪಟಾಕಿಗೆ ದುರಂತಗಳಾಗಿವೆ. ತಮಿಳುನಾಡಿನಲ್ಲಿ ದೀಪಾವಳಿ ಸಂಭ್ರಮದ ವೇಳೆ 10 ವರ್ಷದ ಬಾಲಕ ಸಾವನ್ನಪ್ಪಿದ್ದು, 269 ಮಂದಿಗೆ ಗಾಯಗಳಾಗಿವೆ. ಹೈದರಾಬಾದ್ನಲ್ಲಿ ಪಟಾಕಿ ಅವಘಡದಲ್ಲಿ 73 ಮಂದಿಗೆ ಗಾಯವಾಗಿದೆ. ರಾಜಸ್ಥಾನ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದಲ್ಲಿ ಭೀಕರ ಬಸ್ ಅಪಘಾತ: ಮೂವರು ಸಾವು, 45ಕ್ಕೂ ಹೆಚ್ಚು ಮಂದಿಗೆ ಗಾಯ
ಉತ್ತರ ಪ್ರದೇಶದ ಲಖನೌ-ಆಗ್ರಾ ಎಕ್ಸ್ಪ್ರೆಸ್ವೇನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 40 ಅಡಿ ಆಳದ ಕಂದಕಕ್ಕೆ ಉರುಳಿದೆ. ಭಿವಾಡಿಯಿಂದ ಬಿಹಾರದ ಛಾಪ್ರಾ ಕಡೆಗೆ ತೆರಳುತ್ತಿದ್ದ ಬಸ್, ಲಖನೌನ ಪಾರಾ ಜೀರೋ ಪಾಯಿಂಟ್ ಸಮೀಪ ಬೆಳಗ್ಗೆ 6:30ರ ಸುಮಾರಿಗೆ ಅಪಘಾತಕ್ಕೀಡಾಗಿದೆ.
ಅಪಘಾತದ ತೀವ್ರತೆಯಿಂದ ಬಸ್ನಲ್ಲಿದ್ದ ಹಲವರು ಒಳಗೆ ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ನ ಕಿಟಕಿಗಳ ಮೂಲಕ ಪ್ರಯಾಣಿಕರನ್ನು ಹೊರತೆಗೆದು ಆಂಬುಲೆನ್ಸ್ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಇದನ್ನೂ ಓದಿ: ದೀಪಾವಳಿ ಸಂಭ್ರಮದ ನಡುವೆ ದಿಲ್ಲಿಯಲ್ಲಿ ಹೆಚ್ಚಿದ ಮಾಲಿನ್ಯ – ನಗರವನ್ನೇ ಮುಚ್ಚಿಕೊಂಡ ದಟ್ಟ ಹೊಗೆ, ಮಂಜು
ಗಾಯಾಳುಗಳ ಪೈಕಿ 31 ಮಂದಿಯನ್ನು ಲೋಕಬಂಧು ಆಸ್ಪತ್ರೆಗೆ ಹಾಗೂ 13 ಮಂದಿಯನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಮಕ್ಕಳು ಕೂಡ ಇದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ನ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ.
