ಬೆಂಗಳೂರು: ರಾಹು, ಗುಳಿಕ, ಯಮಗಂಡ ಕಾಲ ನೋಡಿಕೊಂಡು ನಾನು ಬಜೆಟ್ ಮಂಡಿಸಲ್ಲ. ಆದರೆ ನಿನ್ನಂಥವರೂ ಇರ್ತಾರೆ, ಅವರ ಮಾತೂ ಕೇಳಬೇಕಲ್ಲ ಅಂತ ರಾಹುಕಾಲಕ್ಕೂ ಮುನ್ನವೇ ಬಜೆಟ್ ಶುರು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸ್ಪಷ್ಟನೆ ಕೊಟ್ಟಿದ್ದಾರೆ
ರಾಹುಕಾಲ ನೋಡಿ ಬಜೆಟ್ ಮಂಡನೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ನಿಜ ನಾನು ರಾಹುಕಾಲ, ಗುಳಿಕ ಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದೇನೆ. ನಿನ್ನಂಥವರೂ ಇರ್ತಾರೆ, ಅವರ ಮಾತೂ ಕೇಳಬೇಕಲ್ಲ. ನಮ್ಮ ಅಧಿಕಾರಿಗಳು, ಮನೆಯವರ ಮಾತು ಕೇಳಿ ರಾಹುಕಾಲಕ್ಕೂ ಮುನ್ನವೇ ಬಜೆಟ್ ಶುರು ಮಾಡಿದೆ. ಹಿಂದೆಲ್ಲ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದೇನೆ. ಆದರೆ ನನಗೆ ಇದರಲ್ಲೆಲ್ಲ ನಂಬಿಕೆ ಇಲ್ಲ. ನಾನು ಯಾವತ್ತೂ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ನೋಡಿಲ್ಲ. ಯುಗಾದಿ, ಶಿವರಾತ್ರಿ ಹಬ್ಬದ ದಿನ ಯಾರೂ ಮಾಂಸ ತಿನ್ನಲ್ಲ, ಆದ್ರೆ ನಾನು ತಿನ್ನುತ್ತೇನೆ. ಎಲ್ಲ ಅವರವರ ನಂಬಿಕೆ ಅಂತಾ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿ ಆದ್ಮೇಲೆ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ: ಸದನಕ್ಕೆ ಸಿಎಂ ಮಾಹಿತಿ
ಇದೇ ವೇಳೆ ಸಿಎಂಗೆ ಕಾಲೆಳೆದ ಸುನೀಲ್ ಕುಮಾರ್, ನೀವು ಶಾಲು ಹಾಕಿದ ಬಳಿಕ ಸಿಎಂ ಆಗಿದ್ದು. ಅದಕ್ಕೆ ಈಗ ಡಿಕೆಶಿ ಅವರೂ ನಿಮ್ಮನ್ನು ನೋಡಿ ಶಾಲು ಹಾಕ್ತಿದ್ದಾರೆ ಎಂದು ತಿರುಗೇಟು ನೀಡಿದ್ರು. ಆಗ ಮತ್ತೆ ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ, ಸಿಎಂ ಸ್ಥಾನ ಸಿಗುವ ಮುನ್ನದಿಂದ ನಾನು ಶಾಲು ಹಾಕ್ತಿದ್ದೇನೆ. ಮೊದಲು ಟವೆಲ್ ಹಾಕ್ತಿದ್ದೆ, ಬಗ್ಗಿದ್ರೆ ಅದು ಯಾವಾಗಲೂ ಬೀಳ್ತಿತ್ತು, ಅದಕ್ಕೆ ಶಾಲು ಹಾಕಿಕೊಂಡೆ. ಇದಕ್ಕೆ ಯಾವ ಶಾಸ್ತ್ರನೂ ಇಲ್ಲ, ರಾಹುಕಾಲನೂ ಇಲ್ಲ. ನಾನು ಈಗ ಶಾಲು ಹಾಕಿರೋದು ಕಾಸ್ಟ್ಲೀ, ಪ್ಯೂರ್ ಸಿಲ್ಕ್ ಅಂದರು. ಆಗ ಅದು 13,500 ರೂ.ಯದ್ದು ಎಂದು ಡಿಕೆಶಿ ರೇಟ್ ಹೇಳಿದ್ರು. ಅದಕ್ಕೆ ಹೌದು ಎಂದು ಸಿಎಂ ಸಮ್ಮತಿಸಿದ್ದಾರೆ.
ಇನ್ನೂ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ. ದೇವರು ಇದ್ದಾನೆ, ನಾನೂ ನಂಬ್ತೀನಿ. ಆದ್ರೆ ದೇವಸ್ಥಾನದಲ್ಲೇ ಇದ್ದಾನೆ, ಬೇರೆ ಕಡೆ ಇಲ್ಲ ಅನ್ನೋದನ್ನು ನಂಬಲ್ಲ. ಅಲ್ಲದೆ. ಯೋಗದ ಬಗ್ಗೆಯೂ ನನಗೆ ನಂಬಿಕೆ ಇಲ್ಲ, ನಾನು ಹಳ್ಳಿಯಿಂದ ಬಂದವನು ಅಂತಾ ಹೇಳಿದ್ರು. ಅದಕ್ಕೆ ಯೋಗದಿಂದ 2 ಸಲ ಸಿಎಂ ಆಗಿದ್ದು ಅಂತಾ ಸುನೀಲ್ ಕುಮಾರ್ ಕಾಲೆಳೆದಿದ್ದಾರೆ.ಇದನ್ನೂ ಓದಿ: ಹೈಕಮಾಂಡ್ ತೀರ್ಮಾನಿಸೋವರೆಗೂ ನಾನೇ ಸಿಎಂ: ಸಿದ್ದರಾಮಯ್ಯ

