– ಕರಾವಳಿಯಲ್ಲಿ ನಡೆಯುವ ಪ್ರತಿ ಕಂಬಳಕ್ಕೆ ತಲಾ 5 ಲಕ್ಷ ಅನುದಾನ
ಉಡುಪಿ: ವಿವಾದಗಳ ನಡುವೆಯೇ ಕಂಬಳಕ್ಕೆ (Kambala) ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕರಾವಳಿಯಲ್ಲಿ ನಡೆಯುವ ಕಂಬಳಕ್ಕೆ ಅನುದಾನ ಘೋಷಿಸಿದೆ.
ಇನ್ಮುಂದೆ ಪ್ರತಿಯೊಂದು ಕಂಬಳಕ್ಕೂ ತಲಾ 5 ಲಕ್ಷ ಅನುದಾನ ನೀಡಲಾಗುವುದು. 2025- 26 ನೇ ಸಾಲಿನ 23 ಕಂಬಳಗಳಿಗೆ ಒಟ್ಟು 1.15 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಹಣ ರಿಲೀಸ್ ಮಾಡಲಾಗಿದೆ. ಸರ್ಕಾರದ ನಿರ್ಧಾರವನ್ನು ಕಂಬಳ ಸಂಘಟಕರು ಸ್ವಾಗತಿಸಿದ್ದಾರೆ. ಇದನ್ನೂ ಓದಿ: 2 ದಿನಗಳ ಕಂಬಳಕ್ಕೆ ಕೆರೆಯೂ ಬಲಿ – ಮೈಸೂರಲ್ಲಿ 150ಕ್ಕೂ ಹೆಚ್ಚು ಮರಗಳಿಗೆ ಕತ್ತರಿ!
ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ ದೇವಿಪ್ರಸಾದ ಶೆಟ್ಟಿ (Deviprasad Shetty) ಮಾತನಾಡಿ, ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಂಬಳ ಆಯೋಜಕರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಪ್ರತಿ ಕಂಬಳಕ್ಕೂ 5 ಲಕ್ಷ ಅನುದಾನ ನೀಡಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಂಬಳಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಂಬಳ ಆಯೋಜನೆ ದೊಡ್ಡ ಹೊರೆ. ಸಂಪ್ರದಾಯ, ಸಂಸ್ಕೃತಿ ತುಳುನಾಡಿನ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಲು ಇದರಿಂದ ಅನುಕೂಲವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿದ್ದರು. ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ ಕಂಬಳಗಳಿಗೆ ಒಂದು ಕೋಟಿ ಅನುದಾನ ಕೊಟ್ಟಿದ್ದರು. ರಾಜಕೀಯ ಭೇದವಿಲ್ಲದೆ ಎಲ್ಲ ಸರ್ಕಾರಗಳು ಕಂಬಳವನ್ನು ಪೋಷಿಸಿವೆ. ಇದು ಕಂಬಳಕ್ಕೆ ಸರ್ಕಾರಗಳು ಕೊಟ್ಟ ಗೌರವ ಎಂದು ಬಣ್ಣಿಸಿದರು.
ಮುಂದಿನ ಬಜೆಟ್‌ನಲ್ಲಿ ಕಂಬಳಕ್ಕೆ ಐದು ಕೋಟಿ ಅನುದಾನ ಮೀಸಲಿರಿಸಬೇಕು ಎಂಬ ಬೇಡಿಕೆ ಇದೆ. ಜೋಡುಕರೆಯಲ್ಲಿ ಎಂಟು ಸಾಂಪ್ರದಾಯಿಕ ಕಂಬಳಗಳಿವೆ. ಅವುಗಳಿಗೆ ಅನುದಾನ ಲಭ್ಯವಾಗಲಿದೆ. ಬೈಂದೂರು ಕುಂದಾಪುರ ಕಡೆಯಲ್ಲಿ ಒಂಟಿ ಕರೆ ಕಂಬಳ ನಡೆಸಲಾಗುತ್ತದೆ. ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಅವರನ್ನು ಸೇರ್ಪಡೆ ಮಾಡುತ್ತೇವೆ. ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಿದ್ರೆ ತಪ್ಪೇನು?: ದೇವಿಪ್ರಸಾದ್ ಶೆಟ್ಟಿ
ಮೈಸೂರು ಕಂಬಳ ವಿವಾದ ವಿಚಾರವಾಗಿ ಮಾತನಾಡಿ, ಕಂಬಳದಲ್ಲಿ ರಾಜಕೀಯ ಇಲ್ಲ. ರಾಜಕೀಯ ಧರ್ಮ ಮೀರಿ ನಡೆಯುವ ಕ್ರೀಡೆ. ಎಲ್ಲ ರಾಜಕೀಯ ಪಕ್ಷದವರು ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ವಿರೋಧ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಪಕ್ಷದ ಕರಾವಳಿಯ ಶಾಸಕರು ವಿರೋಧ ಮಾಡುವುದು ಸರಿಯಲ್ಲ. ಒಂದು ಪಕ್ಷದ ಪರವಾಗಿ ನಿಲುವು ತೆಗೆದುಕೊಂಡಿದ್ದೀರಿ. ಕಂಬಳ ನಿಮಗೆ ಗೌರವ ಕೊಟ್ಟಿದೆ. ನೀವೇನು ಕಂಬಳಕ್ಕೆ ಗೌರವ ತಂದಿಲ್ಲ. ಕಂಬಳದ ಗೌರವವನ್ನು ರಾಜ್ಯಾದ್ಯಂತ ಎತ್ತಿಹಿಡಿಯಿರಿ ಎಂದರು.
ಕಂಬಳ ನಮ್ಮ ಜಿಲ್ಲೆಗೆ ಮಾತ್ರ ಸೀಮಿತವೇ? ಮೈಸೂರಿನಲ್ಲಿ ಯಾಕೆ ಕಂಬಳ ಆಗಬಾರದು? ಕಂಬಳದ ಬಗ್ಗೆ ಮೈಸೂರಿನಲ್ಲಿ ಅನಗತ್ಯ ಅಪಪ್ರಚಾರವಾಗುತ್ತಿದೆ. ಕೆಳ ವರ್ಗದವರ ದಬ್ಬಾಳಿಕೆ ಎಂದು ಬಿಂಬಿಸಲಾಗುತ್ತಿದೆ. ಹಿಂದುಳಿದ ವರ್ಗದ ಕೋಟೆ ಚೆನ್ನಯ್ಯರ ಹೆಸರಲ್ಲಿ, ಸೂರ್ಯ ಚಂದ್ರರ ಹೆಸರಲ್ಲಿ, ಕಾಂತ ಬಾರೆ ಬೂದ ಬಾರೆ ಹೆಸರಲ್ಲಿ ಕಂಬಳ ಮಾಡುತ್ತೇವೆ. ಇದು ದೇಶಕ್ಕೆ ಮಾದರಿ ವ್ಯವಸ್ಥೆ. ನಮ್ಮ ಕಂಬಳವನ್ನು ವೈಭವೀಕರಿಸುವ ಕೆಲಸವನ್ನು ಕರಾವಳಿಯ ಜನಪ್ರತಿನಿಧಿಗಳು ಧೈರ್ಯದಿಂದ ಮಾಡಿ. ಒಂದು ಪಕ್ಷದ ಕೈಗೊಂಬೆಗಳಂತೆ ನಾನು ಕೂಡ ಮಾಡಬಾರದು ನೀವು ಕೂಡ ಮಾಡಬಾರದು ಎಂದು ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳಿಗೆ ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದರು. ಇದನ್ನೂ ಓದಿ: ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ – ರಾಜಮನೆತನ, ಪ್ರತಾಪ್ ಸಿಂಹ ವಿರೋಧ, ಅಶೋಕ್ ರೈ ಸಮರ್ಥನೆ
