– ಈ ಬಾರಿಯ ದಸರಾಕ್ಕೆ ಕಂಬಳ ಆಯೋಜನೆ
– 20 ಎಕರೆ ಜಾಗ ಸಮತಟ್ಟು ಕೆಲಸ ಆರಂಭ
ಮೈಸೂರು: ದಸರಾ ಮಹೋತ್ಸವದ (Mysuru Dasara) ಅಂಗವಾಗಿ ಎರಡು ದಿನಗಳ ಕಾಲ ಕಂಬಳ(Kambala) ಪ್ರದರ್ಶನ ಆಯೋಜಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರಿನ ಹೊರವಲಯದಲ್ಲಿ ಕಂಬಳಕ್ಕಾಗಿ ನಿಗದಿಪಡಿಸಲಾದ ಜಾಗದಲ್ಲಿ ಭರದಿಂದ ಸಿದ್ಧತೆಗಳು ಆರಂಭವಾಗಿವೆ.
ಮೈಸೂರಿನ ಹೊರವಲಯದ ಸಾತಗಳ್ಳಿ ಬಳಿ ಇರುವ 20 ಎಕರೆ ವಿಸ್ತೀರ್ಣದ ಜಾಗದಲ್ಲಿ ಮಣ್ಣನ್ನು ಸಮತಟ್ಟು ಮಾಡುವ ಕಾರ್ಯ ಈಗಾಗಲೇ ಶುರುವಾಗಿದೆ. 10ಕ್ಕೂ ಹೆಚ್ಚು ಜೆಸಿಬಿ (JCB) ಯಂತ್ರಗಳನ್ನು ಬಳಸಿ ಇಡೀ ಜಾಗವನ್ನು ಹಸನುಗೊಳಿಸಲಾಗುತ್ತಿದೆ.
ಕಂಬಳ ನಡೆಸಲು ಗುರುತಿಸಲಾಗಿರುವ ಸಾತಗಳ್ಳಿಯ ಈ 20 ಎಕರೆ ಪ್ರದೇಶವು ಸದ್ಯ ದಟ್ಟವಾದ ಹಸಿರಿನಿಂದ ಕೂಡಿದೆ. ಈ ಭಾಗದಲ್ಲಿ ವಿವಿಧ ಜಾತಿಯ 150ಕ್ಕೂ ಅಧಿಕ ಬೃಹತ್ ಗಾತ್ರದ ಮರಗಳಿದ್ದು, ಇಡೀ ಪ್ರದೇಶವನ್ನು ಆವರಿಸಿಕೊಂಡಿವೆ. ಆದರೆ ಕಂಬಳದ ಕರೆಯನ್ನು ನಿರ್ಮಿಸುವ ಸಲುವಾಗಿ ಈ ಎಲ್ಲಾ ಮರಗಳನ್ನು ಕಡಿಯಲು ಸಿದ್ಧತೆಗಳು ನಡೆದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ – ರಾಜಮನೆತನ, ಪ್ರತಾಪ್ ಸಿಂಹ ವಿರೋಧ, ಅಶೋಕ್ ರೈ ಸಮರ್ಥನೆ
ಈ ಜಾಗದ ಸಿದ್ಧತೆಯಿಂದಾಗಿ ಪರಿಸರಕ್ಕೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಿದೆ. ಇಲ್ಲಿ ಸುಮಾರು 6 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಬೃಹತ್ ಕೆರೆಯೊಂದಿದೆ. ಮಳೆಯಾದಾಗಲೆಲ್ಲಾ ಸಮೃದ್ಧವಾಗಿ ನೀರು ತುಂಬಿಕೊಳ್ಳುತ್ತಿದ್ದ ಈ ಕೆರೆಯು (Lake) ಹಲವಾರು ಅಪರೂಪದ ಪಕ್ಷಿ ಪ್ರಬೇಧಗಳ ಆವಾಸಸ್ಥಾನವಾಗಿತ್ತು. ಆದರೆ ಈಗ ಕಂಬಳದ ಮೈದಾನ ನಿರ್ಮಿಸುವ ಸಲುವಾಗಿ ಈ ಜೀವಂತ ಕೆರೆಯನ್ನು ಮಣ್ಣು ಹಾಕಿ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ.
ಕಂಬಳ ಪ್ರದರ್ಶನ ಆಯೋಜಿಸಲು ಸಾರ್ವಜನಿಕರು, ಬಿಜೆಪಿ ಜನಪ್ರತಿನಿಧಿಗಳು ಹಾಗೂ ಪರಿಸರವಾದಿಗಳಿಂದ ಎಷ್ಟೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ, ರಾಜ್ಯ ಸರ್ಕಾರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕಂಬಳ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ.
