– ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ
ಶಿವಮೊಗ್ಗ: ಕಲಬುರಗಿ ಜೈಲಿನಿಂದ (Kalaburagi Central Jail) ಖೈದಿಗಳು ಪರಾರಿಯಾದ ಘಟನೆ ಮಾಸುವ ಮುನ್ನವೇ ಶಿವಮೊಗ್ಗದಲ್ಲಿ (Shivamogga) ಸಹ ಅಂತಹದ್ದೇ ಒಂದು ಪ್ರಕರಣ ನಡೆದಿದೆ. ಜೈಲಿಗೆ ಕರೆದೊಯ್ಯುತ್ತಿದ್ದ ಆರೋಪಿಯೊಬ್ಬ ಅರಣ್ಯ ಇಲಾಖೆ ಸಿಬ್ಬಂದಿಗೆ (Forest Department) ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
ಹೊಸನಗರ (Hosanagar) ತಾಲೂಕಿನ ಅಡುಗೋಡಿ ನಿವಾಸಿ ವೆಂಕಟೇಶ್ (36) ಅರಣ್ಯ ಇಲಾಖೆ ವಶದಿಂದ ಪರಾರಿಯಾದ ಆರೋಪಿ. ಈತ 2019-20 ರಲ್ಲಿ ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಚಕ್ರಪಾಣಿ ಅವರ ಮೇಲೆ ಹಲ್ಲೆ ಮಾಡಿದ ಆರೋಪವಿದೆ. ಈ ಸಂಬಂಧ ದಾಖಲಾಗಿದ್ದ ಕರ್ತವ್ಯಕ್ಕೆ ಅಡ್ಡಿ- ಹಲ್ಲೆ ಕೇಸ್ ಅಡಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು. ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದನ್ನೂ ಓದಿ: ಕಿಟಕಿ ರಾಡ್ ಮುರಿದು, ಬಟ್ಟೆಯನ್ನೇ ಹಗ್ಗ ಮಾಡಿ ಗೋಡೆ ಹಾರಿದ್ರು – ಕಲಬುರಗಿ ಜೈಲಿನಿಂದ ಸಿನಿಮಾ ಶೈಲಿ ಕೈದಿಗಳು ಎಸ್ಕೇಪ್
ಕೋರ್ಟ್ ಆದೇಶದಂತೆ ಆತನನ್ನು ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಗುತ್ತಿತ್ತು. ಹೊಸನಗರದ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ಬರುತ್ತಿದ್ದಂತೆ, ಹಸಿವಾಗುತ್ತಿದೆ. ಊಟ ಬೇಕು ಎಂದು ಆರೋಪಿ ಕೇಳಿದ್ದಾನೆ. ಜೀಪ್ ನಿಲ್ಲಿಸಿ, ಡಿಆರ್‌ಎಫ್‌ಓ ಸುನೀಲ್ ಡಿ ಕುಂಬಾರ್ ಹಾಗೂ ಇಬ್ರಾಹಿಂ ಊಟ ತರಲು ತೆರಳಿದ್ದರು. ಈ ವೇಳೆ ಜೀಪ್‌ನಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಬಟ್ಟೆಮಲ್ಲಪ್ಪ ಸುತ್ತಮುತ್ತ ಆರೋಪಿಗಾಗಿ ತೀವ್ರ ಶೋಧ ನಡೆಯುತ್ತಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಪರಾರಿಯಾಗಿದ್ದ ಆರೋಪಿ ಅರೆಸ್ಟ್ ವೇಳೆ ಪೊಲೀಸರಿಂದ ಫೈರಿಂಗ್
