– ಸ್ಪೇನ್‌ನ ಯುವ ಆಟಗಾರ ಲ್ಯಾಮಿನ್ ಯಮಲ್ ಮಗುವಾಗಿದ್ದಾಗ ಎತ್ತಿ ಆಟವಾಡಿಸಿದ್ದ ಮೆಸ್ಸಿ
ನ್ಯೂಯಾರ್ಕ್: 19 ವರ್ಷಗಳ ಹಿಂದೆ ಅರ್ಜೆಂಟೀನಾ ಸ್ಟಾರ್ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ (Lionel Messi) ಅಪರೂಪದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದ್ದರು. ಪುಟ್ಟ ಮಗುವೊಂದಕ್ಕೆ ಮೆಸ್ಸಿ ಸ್ನಾನ ಮಾಡಿಸಿ, ತನ್ನ ತೋಳುಗಳಲ್ಲಿ ಎತ್ತಿ ಆಡಿಸಿದ್ದರು. ಆ ಮಗುವೇ ಈಗ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ತನಗೆ ಎದುರಾಳಿಯಾಗಿ ನಿಲ್ಲುತ್ತಾನೆ ಅಂತ ಸ್ವತಃ ಮೆಸ್ಸಿ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ.
ಅರ್ಜೆಂಟೀನಾ ತಂಡವು ಇಂಗ್ಲೆಂಡ್ ವಿರುದ್ಧ 2-1 ಅಂತರದ ರೋಚಕ ಗೆಲುವಿನೊಂದಿಗೆ 2026 ರ ಫಿಫಾ ವಿಶ್ವಕಪ್ ಫೈನಲ್‌ಗೇರಿದೆ. ಪ್ರಶಸ್ತಿ ಸುತ್ತಿನಲ್ಲಿ ಸ್ಪೇನ್ ವಿರುದ್ಧ ಸೆಣಸಲಿದೆ. ಅನುಭವಿ ಮೆಸ್ಸಿಗೆ ಈಗ ತಾನೇ ಫುಟ್ಬಾಲ್ ಜಗತ್ತಿಗೆ ಕಾಲಿಟ್ಟಿರುವ 19ರ ಹರೆಯದ ಹುಡುಗನೊಬ್ಬ ಎದುರಾಳಿಯಾಗಿದ್ದಾನೆ. ಆತನೇ ಲ್ಯಾಮಿನ್ ಯಮನ್. ಸ್ಪೇನ್ ತಂಡದ ಯುವಕ ಲ್ಯಾಮಿನ್ ಯಮಲ್ (Lamine Yamal) ಟೂರ್ನಿಯುದ್ದಕ್ಕೂ ನಿರ್ಭೀತ ಪ್ರದರ್ಶನಗಳೊಂದಿಗೆ ಫುಟ್ಬಾಲ್ ಜಗತ್ತನ್ನೇ ಬೆರಗುಗೊಳಿಸಿದ್ದಾನೆ. ಒಬ್ಬರು ಮತ್ತೊಂದು ವಿಶ್ವಕಪ್ ಪ್ರಶಸ್ತಿಯನ್ನು ಬೆನ್ನಟ್ಟಿದ್ದಾರೆ. ಮತ್ತೊಬ್ಬರು ತಮ್ಮ ಯುವ ವೃತ್ತಿಜೀವನದ ಅತಿದೊಡ್ಡ ಕ್ಷಣವನ್ನು ಬೆನ್ನಟ್ಟಿದ್ದಾರೆ. ಇದನ್ನೂ ಓದಿ: FIFA World Cup: ಮೆಸ್ಸಿ ಮ್ಯಾಜಿಕ್ – ಸತತ 2ನೇ ಟ್ರೋಫಿಗಾಗಿ ಫೈನಲ್‌ಗೆ ಅರ್ಜೆಂಟೀನಾ ಎಂಟ್ರಿ, ಇಂಗ್ಲೆಂಡ್ ಔಟ್

ಕಾಕತಾಳೀಯವೆಂಬಂತೆ, ಸ್ಪೇನ್‌ನ ಲ್ಯಾಮಿನ್ ಯಮಲ್ ಪುಟ್ಟ ಮಗುವಾಗಿದ್ದಾಗ, ಅದಾಗಲೇ ಖ್ಯಾತಿ ಗಳಿಸಿದ್ದ ಲಿಯೋನೆಲ್ ಮೆಸ್ಸಿಯ ತೋಳುಗಳಲ್ಲಿ ಆಟವಾಡಿದ್ದ. ಈ ಪುಟ್ಟ ಮಗುವಿಗೆ ಮೆಸ್ಸಿ ಸ್ನಾನ ಮಾಡಿಸಿ, ಎತ್ತಿ ಆಡಿಸಿದ್ದರು. ಅಲ್ಲದೇ ಮಗುವಿನ ಜೊತೆ ಫೋಟೊ ಕೂಡ ತೆಗೆಸಿಕೊಂಡಿದ್ದರು. ಅಪರೂಪದ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದ ಜೋಡಿ ಈಗ ಪ್ರಶಸ್ತಿಗೆ ಸೆಣಸಲಿವೆ.

ಏನದು ಕಥೆ?
2007 ರಲ್ಲಿ ಕ್ಯಾಟಲಾನ್ ಪತ್ರಿಕೆ ಡಿಯಾರಿಯೊ ಸ್ಪೋರ್ಟ್ ಆಯೋಜಿಸಿದ್ದ ಯುನಿಸೆಫ್ ಚಾರಿಟಿ ಕ್ಯಾಲೆಂಡರ್ ಫೋಟೋಶೂಟ್‌ನಲ್ಲಿ 20 ವರ್ಷದ ಮೆಸ್ಸಿ ಭಾಗವಹಿಸಿದ್ದರು. ಅಲ್ಲಿಂದಲೇ ಈ ಅಸಾಧಾರಣ ಕಥೆ ಪ್ರಾರಂಭವಾಗಿದ್ದು. ಈ ಅಭಿಯಾನವು ಬಾರ್ಸಿಲೋನಾ ಆಟಗಾರರನ್ನು ಸ್ಥಳೀಯ ಕುಟುಂಬಗಳೊಂದಿಗೆ ಜೋಡಿಸಿತ್ತು. ಆಕಸ್ಮಿಕವೆಂಬಂತೆ ಮೆಸ್ಸಿಯನ್ನು ಲ್ಯಾಮಿನ್ ಯಮಲ್ (ಈಗಿನ ಸ್ಪೇನ್ ಆಟಗಾರ) ಎಂಬ ಶಿಶು ಜೊತೆ ಪೋಸ್ ನೀಡಲು ಕೇಳಲಾಯಿತು. ಮೆಸ್ಸಿ ತುಂಬಾ ಆತ್ಮೀಯತೆಯಿಂದ ಮಗುವಿಗೆ ಸ್ನಾನ ಮಾಡಿಸಿ, ಆತನನ್ನು ಎತ್ತಿಕೊಂಡು ಫೋಟೊಗಳಿಗೆ ಪೋಸ್ ಕೊಟ್ಟಿದ್ದರು. ಮುಂದೊಂದು ದಿನ ಆ ಮಗುವೇ ಫುಟ್‌ಬಾಲ್‌ನ ಅಸಾಧಾರಣ ತಾರೆಗಳಲ್ಲಿ ಒಬ್ಬನಾಗುತ್ತಾನೆ ಅಂತ ಸ್ವತಃ ಮೆಸ್ಸಿ ಭಾವಿಸಿರಲಿಲ್ಲ. ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಮಿಂಚಿದ ಎರ್ಲಿಂಗ್ ಹಾಲೆಂಡ್; ನಾರ್ವೆಯಲ್ಲಿ 550 ಕ್ಕೂ ಹೆಚ್ಚು ಮಕ್ಕಳಿಗೆ ಹಾಲೆಂಡ್ ಹೆಸರಿಟ್ಟ ಪೋಷಕರು

2024 ರಲ್ಲಿ ಯಮಲ್ ಅವರ ತಂದೆ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದರು. ಅಂದು ಮೆಸ್ಸಿಯ ತೋಳುಗಳಲ್ಲಿದ್ದ ಮಗು ಇಂದು ಬಾರ್ಸಿಲೋನಾದ ಹೊಸ ಅದ್ಭುತ ಪ್ರತಿಭೆಯಾಗಿ ಬೆಳೆದಿರುವ ವಿಚಾರ ತಿಳಿದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಫೋಟೊಗಳು ಸಖತ್ ವೈರಲ್ ಆಗಿವೆ. ಯುವಕ ಯಮಲ್ ಫುಟ್ಬಾಲ್ ಜಗತ್ತಿನಲ್ಲಿ ನಿರೀಕ್ಷೆಗಳನ್ನು ಮೀರಿ ಬೆಳೆದಿದ್ದಾರೆ. ಕ್ಲಬ್ ಮತ್ತು ದೇಶಕ್ಕಾಗಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದಾರೆ. ಸ್ಪೇನ್‌ನ ಹೊಸ ಪೀಳಿಗೆಯ ಹಿಂದಿನ ಸೃಜನಶೀಲ ಶಕ್ತಿಯಾಗಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಯಮಲ್ ಆಟಕ್ಕೆ ಜಗತ್ತೇ ನಿಬ್ಬೆರಗಾಗಿದೆ. ಫುಟ್ಬಾಲ್‌ನ ಮುಂದಿನ ಜಾಗತಿಕ ಸೂಪರ್‌ಸ್ಟಾರ್ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಇನ್ನೊಂದು ಬದಿಯಲ್ಲಿ ತಾನು ಮೆಚ್ಚಿಕೊಂಡು ಬೆಳೆದ ಆಟಗಾರ ತನಗೆ ಎದುರಾಳಿ.

ಫ್ರಾನ್ಸ್ ವಿರುದ್ಧ 0-2 ಅಂತರದಲ್ಲಿ ಗೆದ್ದು ಸ್ಪೇನ್ ಫೈನಲ್ ಪ್ರವೇಶಿಸಿದೆ. ಹಾಗೆಯೇ ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 1-2 ಅಂತರದ ಗೆಲುವು ದಾಖಲಿಸಿ ಅರ್ಜೆಂಟೀನಾ ಕೂಡ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಫಿಫಾ ಟ್ರೋಫಿಗಾಗಿ ಇದೇ 20 ರಂದು ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲಿವೆ. ಇದನ್ನೂ ಓದಿ: FIFA World Cup | ಫ್ರಾನ್ಸ್ ಮಣಿಸಿ ಫೈನಲ್‌ಗೆ ಸ್ಪೇನ್ ಎಂಟ್ರಿ
