– ಪುರಿ ಜಗನ್ನಾಥನ ರಥ ಎಳೆದರೆ ಮೋಕ್ಷ ಪ್ರಾಪ್ತಿಯ ವಿಶ್ವಾಸ
– ಚಿಕ್ಕಮ್ಮ ಗುಂಡಿಚಾ ದೇವಿಯ ಮನೆಗೆ ಜಗನ್ನಾಥ ಸಾಗುವ ಕಥೆ
ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದ ಒಡಿಶಾದ (Odisha) ಪುರಿ ಜಗನ್ನಾಥನ (Puri Jagannath) ಐತಿಹಾಸಿಕ ರಥಯಾತ್ರೆಯು ಸಾಂಪ್ರದಾಯಿಕವಾಗಿ ಧಾರ್ಮಿಕ ಶ್ರದ್ಧಾಭಕ್ತಿಗಳೊಂದಿಗೆ ಅದ್ಧೂರಿಯಾಗಿ ಇಂದು ಜರುಗಲಿದೆ.
ಬುಧವಾರ ಸಂಜೆ ಪುರಿಯಲ್ಲಿ ಸುರಿದ ಅಬ್ಬರದ ಮಳೆಯ ನಡುವೆಯೂ ಪವಿತ್ರ ರಥಯಾತ್ರೆಗಾಗಿ ((Puri Jagannath Chariot) ಭಕ್ತರ ಬೃಹತ್ ಸಾಗರವೇ ತುಂಬಿ ತುಳುಕುತ್ತಿದೆ. ಮಳೆಯಲ್ಲಿ ನೆನೆದರೂ ಉತ್ಸಾಹದ ಕೊರತೆಯಾಗದೇ ಜಗನ್ನಾಥನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಿದ್ದಾರೆ.

ಜಗತ್ತಿನ ಪಾಲಕ ಜಗನ್ನಾಥ ತನ್ನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರೆಯೊಂದಿಗೆ ವರ್ಷಕ್ಕೊಮ್ಮೆ ಚಿಕ್ಕಮ್ಮ ಗುಂಡಿಚಾ ದೇವಿಯ ಮನೆಗೆ ಸಾಗುವ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಪುರಿ ನಗರಕ್ಕೆ ಲಕ್ಷಾಂತರ ಭಕ್ತರು ಹರಿದುಬಂದಿದ್ದಾರೆ. ಮೂವರು ಒಟ್ಟಿಗೆ ಪುರಿಯಲ್ಲಿ ನೆಲೆಸಲು ಒಂದು ಸುಂದರ ಮತ್ತು ಭಾವನಾತ್ಮಕವಾದ ಪೌರಾಣಿಕ ಕಥೆಯಿದೆ.
ರುಕ್ಮಿಣಿಯನ್ನು ಮದುವೆಯಾಗಿ ದ್ವಾರಕೆಯಲ್ಲಿದ್ದ ಕೃಷ್ಣನಿಗೆ (Lord Krishna) ತನ್ನ ಬಾಲ್ಯದ ದಿನಗಳು, ಗೋಪಿಕೆಯರು ಹಾಗೂ ಮುಖ್ಯವಾಗಿ ತಾಯಿ ಯಶೋದೆಯ ನೆನಪು ಸದಾ ಕಾಡುತ್ತಿತ್ತು. ಕೃಷ್ಣನು ನಿದ್ದೆಯಲ್ಲೂ `ರಾಧಾ.. ರಾಧಾ..’ ಎಂದು ಪಿಸುಗುಟ್ಟುತ್ತಾ ಕಣ್ಣೀರು ಹಾಕುತ್ತಿದ್ದನು. ಇದನ್ನು ಗಮನಿಸಿದ ಕೃಷ್ಣನ ಪತ್ನಿಯರಾದ ರುಕ್ಮಿಣಿ, ಸತ್ಯಭಾಮೆಗೆ ಆಶ್ಚರ್ಯ ಮತ್ತು ಗೊಂದಲ ಮೂಡುತ್ತದೆ. ನಾವೆಲ್ಲರೂ ಇಷ್ಟೊಂದು ಪ್ರೀತಿಯಿಂದ ನೋಡಿಕೊಂಡರೂ ಕೃಷ್ಣನಿಗೆ ವೃಂದಾವನದ ಮೇಲಿರುವ ಪ್ರೀತಿ ಎಂಥದ್ದು? ಎಂದು ತಿಳಿಯಲು ಬಯಸುತ್ತಾರೆ.

ಶ್ರೀಕೃಷ್ಣನ ಬಾಲ್ಯದ ಲೀಲೆಗಳನ್ನು ಹತ್ತಿರದಿಂದ ನೋಡಿದ್ದ ವಸುದೇವನ ಮೊದಲ ಪತ್ನಿ ರೋಹಿಣಿ ದೇವಿಯ ಬಳಿ ಕೃಷ್ಣನ ಪತ್ನಿಯರು ಹೋಗಿ, ವೃಂದಾವನದ ಕಥೆಯನ್ನು ಹೇಳುವಂತೆ ವಿನಂತಿಸುತ್ತಾರೆ. ರೋಹಿಣಿ ದೇವಿ ಒಪ್ಪಿಕೊಳ್ಳುತ್ತಾಳೆ, ಆದರೆ ಒಂದು ಷರತ್ತು ಹಾಕುತ್ತಾಳೆ. ನಾನು ವೃಂದಾವನದ ಮತ್ತು ರಾಧೆಯ ಭಕ್ತಿಯ ಕಥೆ ಹೇಳುವಾಗ ಶ್ರೀಕೃಷ್ಣ ಮತ್ತು ಬಲರಾಮರು ಅದನ್ನು ಕೇಳಬಾರದು. ಏಕೆಂದರೆ ಆ ಕಥೆಯನ್ನು ಕೇಳಿದರೆ ಅವರು ಭಾವಪರವಶರಾಗಿ ಕರಗಿಹೋಗುತ್ತಾರೆ. ಆದ್ದರಿಂದ ಅವರು ಒಳಗಡೆ ಬರದಂತೆ ನೋಡಿಕೊಳ್ಳಿ ಎಂದು ಹೇಳುತ್ತಾಳೆ. ಅದರಂತೆ, ಕೃಷ್ಣನ ತಂಗಿ ಸುಭದ್ರೆಯನ್ನು ಕೊಠಡಿಯ ಮುಖ್ಯ ದ್ವಾರದಲ್ಲಿ ಕಾವಲು ನಿಲ್ಲಿಸಲಾಗುತ್ತದೆ. ಯಾರೂ ಒಳಗೆ ಬರದಂತೆ ತಡೆಯುವುದು ಸುಭದ್ರೆಯ ಜವಾಬ್ದಾರಿಯಾಗಿರುತ್ತದೆ.
ಕೊಠಡಿಯ ಒಳಗಡೆ ರೋಹಿಣಿ ದೇವಿಯು ರಾಧಾ ಮತ್ತು ಕೃಷ್ಣನ ಪರಮ ಪವಿತ್ರವಾದ ಭಕ್ತಿ ಹಾಗೂ ಪ್ರೇಮದ ಕಥೆಯನ್ನು ವಿವರಿಸಲು ಪ್ರಾರಂಭಿಸುತ್ತಾಳೆ. ಆ ಕಥೆಯಲ್ಲಿದ್ದ ಭಕ್ತಿಯ ಸೆಳೆತ ಹೇಗಿತ್ತೆಂದರೆ ದ್ವಾರದ ಬಳಿ ಕಾವಲು ನಿಂತಿದ್ದ ಸುಭದ್ರೆ ಕಥೆಯನ್ನು ಕೇಳುತ್ತಾ ತನ್ಮಯಳಾಗಿಬಿಡುತ್ತಾಳೆ.

ಅದೇ ಸಮಯದಲ್ಲಿ ಅಲ್ಲಿಗೆ ಬಂದ ಶ್ರೀಕೃಷ್ಣ ಮತ್ತು ಬಲರಾಮನಿಗೆ ಒಳಗಡೆ ನಡೆಯುತ್ತಿದ್ದ ಕಥೆ ಕೇಳಿಸುತ್ತದೆ. ಮೂವರೂ ಆ ದಿವ್ಯ ಭಕ್ತಿಯ ಕಥೆಯಲ್ಲಿ ಸಂಪೂರ್ಣವಾಗಿ ಕಳೆದುಹೋಗುತ್ತಾರೆ. ಆ ಆನಂದ ಹಾಗೂ ಭಾವಪರವಶತೆಯಿಂದಾಗಿ ಮೂವರ ದೇಹಗಳು ಕರಗಲು ಪ್ರಾರಂಭಿಸುತ್ತವೆ. ಅವರ ಕಣ್ಣುಗಳು ಆನಂದದಿಂದ ದೊಡ್ಡದಾಗುತ್ತವೆ. ಕೈ ಮತ್ತು ಕಾಲುಗಳು ದೇಹದ ಒಳಗಡೆ ಮುದುಡಿಕೊಳ್ಳುತ್ತವೆ. ಮೂವರೂ ಭಕ್ತಿಯ ಪರಮಾವಧಿಯಲ್ಲಿ ಈ ವಿಶಿಷ್ಟ ರೂಪಕ್ಕೆ ಬಂದು ನಿಲ್ಲುತ್ತಾರೆ.

ಅದೇ ಕ್ಷಣದಲ್ಲಿ ಅಲ್ಲಿಗೆ ಮಹರ್ಷಿ ನಾರದರು ಆಗಮಿಸುತ್ತಾರೆ. ಮೂವರೂ ಭಕ್ತಿಯಿಂದ ಕರಗಿ ನಿಂತಿರುವ ಆ ಅಪೂರ್ವ ಹಾಗೂ ದಿವ್ಯವಾದ ರೂಪವನ್ನು ನೋಡಿ ನಾರದರು ಮಂತ್ರಮುಗ್ಧರಾಗುತ್ತಾರೆ. ತಕ್ಷಣ ಅವರು ಶ್ರೀಕೃಷ್ಣನಿಗೆ ನಮಸ್ಕರಿಸಿ, “ಹೇ ಪ್ರಭು, ನಿಮ್ಮ ಈ ದಿವ್ಯ ರೂಪ ಜಗತ್ತಿನಲ್ಲೇ ಅತ್ಯಂತ ಅಪರೂಪದ್ದು. ಭಕ್ತಿಗೆ ಭಗವಂತನು ಕರಗುತ್ತಾನೆ ಎಂಬುದಕ್ಕೆ ಈ ರೂಪವೇ ಸಾಕ್ಷಿ. ದಯವಿಟ್ಟು ನೀವು ಮೂವರೂ ಇದೇ ರೂಪದಲ್ಲಿ ಭೂಮಿಯ ಮೇಲೆ ನೆಲೆಸಬೇಕು. ಕಲಿಯುಗದ ಭಕ್ತರು ನಿಮ್ಮ ಈ ರೂಪವನ್ನು ಆರಾಧಿಸಿ ಮುಕ್ತಿ ಪಡೆಯುವಂತಾಗಲಿ” ಎಂದು ಬೇಡಿಕೊಳ್ಳುತ್ತಾರೆ. ನಾರದರ ಭಕ್ತಿಗೆ ಮೆಚ್ಚಿದ ಶ್ರೀಕೃಷ್ಣನು, `ಕಲಿಯುಗದಲ್ಲಿ ನಾನು, ನನ್ನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರೆ ಇದೇ ರೂಪದಲ್ಲಿ ಪುರಿ ಕ್ಷೇತ್ರದಲ್ಲಿ ನೆಲೆಸುತ್ತೇವೆ’ ಎಂದು ವರ ನೀಡುತ್ತಾನೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರಿಗೆ ಪತ್ನಿಯರಾದ ಲಕ್ಷ್ಮಿ, ಸರಸ್ವತಿ, ಸೀತೆ ಅಥವಾ ರಾಧೆಯೊಂದಿಗೆ ಪೂಜಿಸಲಾಗುತ್ತದೆ. ಆದರೆ ಪುರಿ ಜಗನ್ನಾಥ ದೇವಾಲಯದಲ್ಲಿ ಮಾತ್ರ ಶ್ರೀಕೃಷ್ಣನನ್ನು ಅವನ ಒಡಹುಟ್ಟಿದವರಾದ ಅಣ್ಣ ಮತ್ತು ತಂಗಿಯೊಂದಿಗೆ ಪೂಜಿಸಲಾಗುತ್ತದೆ. ಒಡಹುಟ್ಟಿದವರ ನಡುವಿನ ಪವಿತ್ರ ಬಾಂಧವ್ಯ ಮತ್ತು ಭಕ್ತಿಯ ಶಕ್ತಿಗೆ ಈ ಕಥೆಯೇ ಮೂಲ ಕಾರಣ.
ಇಂದು ಗುಂಡಿಚಾ ದೇವಿಯ ಬಳಿ ತೆರಳಿ 9 ದಿನಗಳ ಕಾಲ ಉಳಿದುಕೊಂಡು, ಪೂಜೆ ಮುಗಿದ ನಂತರ, ಭಗವಂತನು ಮರಳಿ ಮುಖ್ಯ ದೇಗುಲಕ್ಕೆ ಪ್ರಯಾಣ ಬೆಳೆಸುತ್ತಾನೆ. ಇದನ್ನು ‘ಬಹುಡಾ ಯಾತ್ರೆ’ ಎಂದು ಕರೆಯಲಾಗುತ್ತದೆ. ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ದಿನದಂದು ಆರಂಭವಾಗುವ ಈ ರಥಯಾತ್ರೆಯಲ್ಲಿ ಪಾಲ್ಗೊಂಡು, ರಥದ ಹಗ್ಗವನ್ನು ಎಳೆದರೆ ಮೋಕ್ಷ ಸಿಗುತ್ತದೆ ಮತ್ತು ಮರುಜನ್ಮ ಇರುವುದಿಲ್ಲ ಎಂಬುದು ಕೋಟ್ಯಂತರ ಭಕ್ತರ ನಂಬಿಕೆಯಾಗಿದೆ.

