– ಶಾಲಾ ವ್ಯಾನ್‌ನಲ್ಲಿ ಆಸ್ಪತ್ರೆಗೆ ಸಾಗಿಸದೇ ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ಆರೋಪ
ಬೆಂಗಳೂರು: ಶಾಲೆಯಲ್ಲಿ ಬಾಲಕ ಕುಸಿದುಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯದೇ ಗಂಟೆಗಟ್ಟಲೇ ಶಾಲೆಯಲ್ಲೇ ಮೃತದೇಹ ಇಟ್ಟುಕೊಂಡಿದ್ದ ವಿಚಾರ ಸಿಸಿಟಿವಿ ದೃಶ್ಯಾವಳಿಯಿಂದ ಬೆಳಕಿಗೆ ಬಂದಿದೆ.
ಅರ್ಹನ್ ಪಾಷಾ (12) ಮೃತ ಬಾಲಕ. ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ಶಾಲೆಯಲ್ಲಿ ಜೂನ್ 10 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯ ಕೊಠಡಿ ಒಳಗಡೆಯೇ ಬೆಂಚ್ ಮೇಲೆ ವಿದ್ಯಾರ್ಥಿ ಕುಸಿದು ಬಿದ್ದಿದ್ದಾನೆ. ಆದರೆ, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯದೇ ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಸುಮಾರು 45 ನಿಮಿಷ ಶಾಲೆಯಲ್ಲೇ ವಿದ್ಯಾರ್ಥಿ ಮೃತದೇಹ ಇಟ್ಟುಕೊಂಡಿದ್ದರು. ನಂತರ ಪೋಷಕರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ರಾಯಚೂರು | ಕೃಷಿ ಹೊಂಡದಲ್ಲಿ ಈಜಲು ಹೋಗಿ ನವ ವಿವಾಹಿತ ವಕೀಲ ಸಾವು
ಮಗು ಸಹಜವಾಗಿ ಮೃತಪಟ್ಟಿದೆ ಎಂದು ಕುಟುಂಬಸ್ಥರು ಸುಮ್ಮನಿದ್ದರು. ಆದರೆ, ಎರಡು ದಿನದ ಹಿಂದೆ ಶಾಲೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕ್ಲಾಸ್ ರೂಂನಲ್ಲಿ ಕುಸಿದ ಬಿದ್ದ ಬಾಲಕನನ್ನ ಬೇರೆ ರೂಮ್‌ಗೆ ಸಾಗಿಸಿದ್ರು. ಶಾಲೆಯಲ್ಲೇ ಗಂಟೆಗಟ್ಟಲೇ ಕಾಲಹರಣ ಮಾಡಿದ್ದರು ಶಾಲಾ ಸಿಬ್ಬಂದಿ. ಆಸ್ಪತ್ರೆಗೆ ಕರೆದೊಯ್ಯಲು ಕನಿಷ್ಠ ಶಾಲಾ ವಾಹನ ಕೂಡ ನೀಡಿಲ್ಲ. ಮಾಹಿತಿ ತಿಳಿದ ತಕ್ಷಣ ಬಂದ ಪೋಷಕರು ಶಾಲೆಯಿಂದ ಬೈಕ್‌ನಲ್ಲಿ ಮಗು ಶವ ಕೊಂಡೊಯ್ದಿದ್ದರು.
ಮೊದಲು ಶಿಕ್ಷಕಿ ಬಳಿ ಸುಸ್ತಾಗ್ತಿದೆ ಅಂತ ವಿದ್ಯಾರ್ಥಿ ಹೇಳಿದ್ದ. ಆದರೆ, ಏನು ಆಗಲ್ಲ ನಿನಗೆ ಒಬ್ಬನಿಗೆ ಶಾಲಾ ವಾಹನ ಕಳಿಸಿಕೊಡುವುದಕ್ಕೆ ಆಗಲ್ಲ ಅಂತ ಉಡಾಫೆ ಮಾತನಾಡಿ ಶಾಲೆಯ ಶಿಕ್ಷಕಿ ಮಗುವಿನ ಬಾಯಿ ಮುಚ್ಚಿಸಿದ್ದರೆಂಬ ಆರೋಪ ಕೇಳಿಬಂದಿದೆ. ಅದಾದ ಬಳಿಕ ವಿದ್ಯಾರ್ಥಿ ಕುಸಿದುಬಿದ್ದಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ಆರೋಪ – ಇನ್‌ಫ್ಲೂಯೆನ್ಸರ್ ಅಮುಕು ಡುಮುಕು ವಿರುದ್ಧ FIR
45 ನಿಮಿಷಗಳ ಕಾಲ ಶಾಲಾ ಕೊಠಡಿಯಲ್ಲೇ ಮಗುವಿನ ಮೃತದೇಹವನ್ನು ಸಿಬ್ಬಂದಿ ಇರಿಸಿಕೊಂಡಿದ್ದರು. ಚಿಕ್ಕಚಿಕ್ಕ ಮಕ್ಕಳ ಬಾಲಕನ ಎದೆ ಒತ್ತುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 45 ನಿಮಿಷಗಳ ನಂತರ ಮಗುವಿನ ಕುಟುಂಬದವರಿಗೆ ಕರೆಮಾಡಿ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಶಾಲೆಯತ್ತ ಓಡಿ ಬಂದಿರುವ ಮಗುವಿನ ಕುಟುಂಬಸ್ಥರು ತಮ್ಮ ಬೈಕ್‌ನಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅದಾಗಲೇ ವಿದ್ಯಾರ್ಥಿ ಮೃತಪಟ್ಟಿದ್ದ. ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಶಾಲೆಯಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ. ಪ್ರಶ್ನೇ ಮಾಡಲು ಹೋಗಿದ್ದ ಪೋಷಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎನ್ನಲಾಗಿದೆ.
