ಬೆಂಗಳೂರು: HMT ಭೂಮಿಯನ್ನ ಇಂದಿನ ಸಿಎಂ 2004 ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗಲೇ ಮಾರಾಟ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (H.D Kumaraswamy) ಹೆಸರು ಹೇಳದೇ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಮೇಲೆ ನೇರ ಆರೋಪ ಮಾಡಿದ್ದಾರೆ.
HMT ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಸಚಿವ ಈಶ್ವರ್ ಖಂಡ್ರೆ ಆರೋಪ ಹಿನ್ನಲೆಯಲ್ಲಿ ಇಂದು ಜಾಲಹಳ್ಳಿಯ HMT ಕ್ಯಾಂಪಸ್ ವೀಕ್ಷಣೆ ಮಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ರು. HMTಗೆ ಹೊಸ ಕಾಯಕಲ್ಪ ಕೊಡಲು ಮುಂದಾಗಿದ್ದೆ. ರಾಜ್ಯ ಸರ್ಕಾರ ನಿರಂತರವಾಗಿ ತೊಂದರೆ ಕೊಡ್ತಾ ಇದ್ದಾರೆ. ಇದು ಅರಣ್ಯ ಭೂಮಿ ಅಂತ ನಿತ್ಯ ಕಾಟ ಕೊಡ್ತಾ ಇದ್ದಾರೆ. ಕಾಟ ಕೊಟ್ಟು ಜಮೀನು ಹೊಡೆಯುವ ಪ್ಲ್ಯಾನ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಮಳೆ ಜಾಸ್ತಿ ಆದ್ರೂ, ಕಡಿಮೆ ಆದ್ರೂ ಮೋದಿನೇ ಕಾರಣ – ಇದು ಕಾಂಗ್ರೆಸ್ ನೀತಿ: ಜೋಶಿ ಕಿಡಿ
HMT ಹಾಳು ಮಾಡಬಾರದು ಅಂತ ಕೈ ಹಾಕಿದ್ದೇವೆ. ಈಶ್ವರ್ ಖಂಡ್ರೆ 175 ಎಕರೆ ಜಾಗ HMT ಅವರು ಮಾರಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಅರಣ್ಯ ಇಲಾಖೆ ಜಾಗ ಅಂತ ಹೇಳ್ತಾರೆ 1958-60 HMTಯಲ್ಲಿ ಕೆಲವು ತೀರ್ಮಾನ ಆಯ್ತು. ನ್ಯಾಯಬದ್ದವಾಗಿ ಜಾಗ HMT ಗೆ ಕೊಡಲಾಗಿದೆ. ಯಾವುದೇ ಅಕ್ರಮ ಇಲ್ಲ. ಈ ಸರ್ಕಾರ ಈಗ ತಕರಾರು ತೆಗೆದಿದ್ದಾರೆ. 15 ಸಾವಿರ ಎಕರೆ ಉಳಿಸಿದ್ದೇನೆ ಅಂತಾರೆ. ಕೋಲಾರದಲ್ಲಿ ಹೇಗೆ ಉಳಿಸಿದ್ದಾರೆ ನೋಡಿದ್ದೇನೆ. 175 ಎಕರೆ ಮಾಡಿದ್ದಾರೆ ಅಂತಾರೆ. ನಾವು ಮಾರಿಲ್ಲ ಅಂತ ಖಂಡ್ರೆ ವಿರುದ್ದ ಕಿಡಿಕಾರಿದರು.

ಬಿಡದಿ ಟೌನ್ ಮಾಡ್ತೀನಿ ಅಂತ ಹೇಳಿರೋರೆ ಈ HMT ಜಾಗ ಮಾರಿರೋದು ಅಂತ ಹೆಸರು ಹೇಳದೆ ಡಿಕೆಶಿ ಮೇಲೆ ಕುಮಾರಸ್ವಾಮಿ ಆರೋಪ ಮಾಡಿದ್ರು. ಎಸ್ ಎಂ ಕೃಷ್ಣ ಅವಧಿಯಲ್ಲಿ ಡಿಕೆಶಿ ನಗರಾಭಿವೃದ್ಧಿ ಸಚಿವ ಆಗಿದ್ದರು. ಖಾಸಗಿ ಅಪಾರ್ಟ್ ಮೆಂಟ್‌ಗೆ ಜಾಗ ಇವರೇ ನೀಡಿರೋದು. ಇವೆಲ್ಲಾ ನಡೆದಿದ್ದು ಡಿ.ಕೆ ಶಿವಕುಮಾರ್ ನಗರಾಭಿವೃದ್ಧಿ ಸಚಿವರು ಆಗಿದ್ದಾಗ. ಹಾಗಾದ್ರೆ ಖಾಸಗಿ ಅವರಿಗೆ ಜಾಗ ಕೊಡಲು ಯಾರ ಪಾಲು ಎಷ್ಟು ಇದೆ. ಬೆಂಗಳೂರು, ಬಿಡದಿ ವಿಶ್ವದರ್ಜೆ ಮಾಡಲು ಮುಂದಾಗಿರೋರ ಪಾಲು ಎಷ್ಟಿದೆ ಈಶ್ವರ್ ಖಂಡ್ರೆ ಅವರೇ ಅಂತ ಪ್ರಶ್ನೆ ಮಾಡಿದ್ರು.
ದೇಶದ ಎಲ್ಲಾ ಭಾಗದ HMT ಅಭಿವೃದ್ಧಿಗೆ ಇಚ್ಚೆಪಟ್ಟಿದ್ದೆ. ಟೇಬಲ್ ಟೇಬಲ್ ಓಡಾಡ್ತಾ ಇದ್ದೇನೆ. 3500 ಎಕರೆ ಜಾಗ HMT ಬೇರೆ ಬೇರೆ ಜಾಗದಲ್ಲಿ ಇದೆ. ಹೀಗೆ ಜಾಗ ಬಿಟ್ಟರೆ ಖಾಸಗಿ ಅವರಿಗೆ ಮಾರಾಟ ಮಾಡ್ತಾರೆ. ಈ ಕ್ಯಾಂಪಸ್ ನ175 ಎಕರೆ ವಿಲೇವಾರಿ ಆಗಿರೋದು ಇಂದಿನ ಸಿಎಂ, ಅಂದಿನ ನಗರಾಭಿವೃದ್ಧಿ ಸಚಿವರ ಕಾಲದಲ್ಲಿ ಅಂತ ಸಿಎಂ ಡಿ.ಕೆ ಶಿವಕುಮಾರ್ ಮೇಲೆ ಕುಮಾರಸ್ವಾಮಿ ಆರೋಪ ಮಾಡಿದ್ರು.
ನಾನು ಹಿಂದೆ ಸಿಎಂ ಆಗಿದ್ದಾಗ ಈ HMT ಜಾಗ ಯಾರಿಗೂ ಮಾರಬಾರದು ಅಂತ ಆದೇಶ ಮಾಡಿದ್ದೆ. ಈಗ ಅಪಾರ್ಟ್ ಮೆಂಟ್ ಗೆ ಕೊಟ್ಟಿರೋ ಜಾಗ ಇನ್ನು ಖಾತೆಯೇ ಆಗಿಲ್ಲ. ನನಗೆ ಖಾತೆ ಮಾಡಿಸಿಕೊಡಿ ಅಂತ ಅರ್ಜಿ ಕೊಡ್ತಿದ್ದಾರೆ. ರಾಜ್ಯ ಸರ್ಕಾರ ಖಾಸಗಿ ಅವರಿಗೆ ಯಾವ ಆಧಾರದಲ್ಲಿ ಕೊಟ್ರಿ? ಸಿಂಗಾಪುರ ಮಾಡೋದಕ್ಕೆ ಮಾಡಿದ್ರಾ?ಬೆಂಗಳೂರು ವಿಶ್ವದರ್ಜೆ ಮಾಡ್ತೀನಿ ಅಂದರು. ಈಗ ಹೊಸ ಸಚಿವರು ಬಂದಿದ್ದಾರೆ ಬೆಂಗಳೂರಿಗೆ ಅದೇನು ಮಾಡ್ತಾರೆ ನೋಡೋಣ. ಕಳೆದ ರೀತಿ ಮಳೆ ಬಿದ್ದಿದ್ದರೆ ನಿಮ್ಮ ಬಂಡವಾಳ ಗೊತ್ತಾಗ್ತಿತ್ತು. ನಾನು ಇದು ಕೊನೆಯ ಸಾರಿ ಮಾತಾಡೋದು. ಸುಪ್ರೀಂಕೋರ್ಟ್ ನಲ್ಲಿ ಕೇಸ್ ಇದೆ. ಅಲ್ಲಿ ಆಗಲಿ ಎಂದರು. ಈಗಲೂ ಹೇಳ್ತಾರೆ ಈಗಲೂ ಡಿ.ಕೆ ಶಿವಕುಮಾರ್ ಅವರ ಜಾಗ ಇದೆ ಇಲ್ಲಿ ಅಂತ. ಬೇನಾಮಿ ಹೆಸರಿನಲ್ಲಿ ಮಾಡಿದ್ದಾರೆ ಅಂತ ಆರೋಪ ಮಾಡಿದ್ರು.
HMT ಅಧಿಕಾರಿಗಳು ಹಿಂದೆ ಶಾಮೀಲಾಗಿ ಈ ಜಾಗ ಮಾರಾಟ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ಈ ಬಗ್ಗೆ ತನಿಖೆಗೆ ಒಳಪಡಿಸಬೇಕಾಗುತ್ತದೆ.ಈಶ್ವರ್ ಖಂಡ್ರೆ ಅವರೇ ನಿಮ್ಮ ಸಿಎಂ ಅವರು ಬದಲಾವಣೆ ಆಗಿದ್ದಾರೆ.ಅವರಿಗೆ ಹೇಳಿಸಿ ಅಕ್ರಮವಾಗಿ ಮಾರಾಟ ಮಾಡಿರೋ ಬಗ್ಗೆ ತನಿಖೆ ಮಾಡಿಸಿ ಅಂತ ಒತ್ತಾಯ ಮಾಡಿದ್ರು.
175 ಎಕರೆ ಯಾರಿಗೆ ಆಗಿದೆ, ಹೇಗೆ ಆಗಿದೆ ಮಾಹಿತಿ ಕೊಡಲು ಅಧಿಕಾರಿಗಳಿಗೆ ಸೂಚನೆ ಕೊಡ್ತೀನಿ.ದೆಹಲಿಗೆ ಹೋದ ಬಳಿಕ ಈ ಬಗ್ಗೆ ಏನ್ ಕ್ರಮ ಆಗಬೇಕು ಅಂತ ತೀರ್ಮಾನ ಮಾಡ್ತೀವಿ.ಕೇಂದ್ರದ ಕ್ಯಾಬಿನೆಟ್ ಈ ವಿಷಯ ತೆಗೆದುಕೊಂಡು ಹೋಗಲು ಯಾವ ರೀತಿ ದಾಖಲಾತಿ ಆಗಬೇಕು ಅದನ್ನ ಮಾಡ್ತೀವಿ ಅಂತ ಭರವಸೆ ಕೊಟ್ಟರು. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಸೋಮವಾರ ಶುಭ ಮುಹೂರ್ತ? – ಹೈಕಮಾಂಡ್ ಮುಂದೆ 2 ದಿನಾಂಕ ಪ್ರಸ್ತಾಪಿಸಿದ ಡಿಕೆಶಿ
