ಕಾರವಾರ: ಭಟ್ಕಳದ ಚಿಪ್ಪೆಕಲ್ಲು ದುರಂತದಲ್ಲಿ ತಾಯಿಯ ಸಾವಿನಿಂದ ಮನನೊಂದ ಮಗ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮೋಳಿನಮನೆಯಲ್ಲಿ ಘಟನೆ ನಡೆದಿದೆ. ಆನಂದ ಅಣ್ಣಪ್ಪ ನಾಯ್ಕ (36) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಎಂ.ಕಾಂ ಪದವೀಧರನಾಗಿರುವ ಅಣ್ಣಪ್ಪ ನಾಯ್ಕ ಮದ್ಯ ವ್ಯಸನಿಯಾಗಿ, ತಾಯಿಯ ಆಶ್ರಯದಲ್ಲಿದ್ದ. ಕಳೆದ ಮೇ ತಿಂಗಳಲ್ಲಿ ನಡೆದ ಶಿರಾಲಿಯ ತಟ್ಟಿಹಕ್ಕಲಿನಲ್ಲಿ ನಡೆದ ಚಿಪ್ಪೆಕಲ್ಲು ದುರಂತದಲ್ಲಿ ತಾಯಿ ಲಕ್ಷ್ಮಿ ಮೃತಪಟ್ಟಿದ್ದರು.
ತಾಯಿಯ ಸಾವಿನಿಂದ ಮನನೊಂದಿದ್ದ ಅಣ್ಣಪ್ಪ ನಾಯ್ಕ ಮನೆಯಲ್ಲೇ ಇರುತ್ತಿದ್ದು ಮದ್ಯದ ದಾಸನಾಗಿದ್ದ. ಅಕ್ಕಪಕ್ಕದ ಜನ ಹಾಗೂ ಕುಟುಂಬದವರು ಸಹ ಆತನಿಗೆ ಕುಡಿತ ಬಿಡಿಸಲು ಪ್ರಯತ್ನಪಟ್ಟಿದ್ದರು. ಆದರೆ, ತಾಯಿಯ ದುರಂತ ಸಾವು ಮನೆಯಲ್ಲಿಯೇ ಇದ್ದ ಈತನಿಗೆ ಕಾಡುತ್ತಿತ್ತು. ಮನೆಯ ಹಿಂಭಾಗದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
