– ಒಂದು ತಿಂಗಳಲ್ಲಿ ಎಷ್ಟು ಬಾರಿ ಬೇಕಾದ್ರೂ ಸಂಚಾರ; ಅರ್ಜಿ ಸಲ್ಲಿಕೆ ಹೇಗೆ?
ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ 121 ಟೋಲ್ ಪ್ಲಾಜಾಗಳಲ್ಲಿ ಆನ್‌ಲೈನ್ ಫಾಸ್ಟ್‌ಟ್ಯಾಗ್ ಸ್ಥಳೀಯ ಪಾಸ್ (Local Toll Pass) ಸೌಲಭ್ಯವನ್ನು ವಿಸ್ತರಿಸಿದೆ. ಈ ಕುರಿತು ಒಂದು ದಿನದ ಹಿಂದೆಯಷ್ಟೇ ಅಧಿಕೃತ ಮಾಹಿತಿ ಪ್ರಕಟಿಸಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳುವಂತೆ, ದೈನಂದಿನ ಪ್ರಯಾಣಿಕರು ‘ರಾಜಮಾರ್ಗ ಯಾತ್ರಾ’ ಮೊಬೈಲ್ ಆ್ಯಪ್ (Rajmargyatra Mobile App) ಮೂಲಕ ಆನ್‌ಲೈನ್ ಮಾಸಿಕ ಸ್ಥಳೀಯ ಪಾಸ್ ಪಡೆಯಬಹುದಾಗಿದೆ. ಇದರಿಂದ ಸ್ಥಳೀಯ ಪಾಸ್ ಪಡೆಯಲು ಟೋಲ್ ಪ್ಲಾಜಾಗೆ ಖುದ್ದಾಗಿ ತೆರಳಿ ಅರ್ಜಿ ಸಲ್ಲಿಸುವುದು ಹಾಗೂ ಅಗತ್ಯ ದಾಖಲೆಗಳನ್ನ ಕೈಯಾರೆ ಸಲ್ಲಿಸುವ ಅಗತ್ಯವೂ ಇರುವುದಿಲ್ಲ ಎಂದು ಹೇಳಿದೆ.

NHAIನಿಂದ ಡಿಜಿಟಲ್ ʻಲೋಕಲ್ ಪಾಸ್ʼ ವ್ಯಾಪ್ತಿ ವಿಸ್ತರಣೆ
ಮೊದಲು ಡಿಜಿಟಲ್ ಲೋಕಲ್ ಪಾಸ್ ಸೌಲಭ್ಯವನ್ನು ಕಳೆದ ಜುಲೈ ತಿಂಗಳಲ್ಲಿ ದೆಹಲಿಯ ಅರ್ಬನ್ ಎಕ್ಸ್‌ಟೆನ್ಷನ್ ರೋಡ್-2 (UER-2)ನ ಮುಂಡ್ಕಾ-ಬಕ್ಕರ್‌ವಾಲಾ ಟೋಲ್ ಪ್ಲಾಜಾದಲ್ಲಿ ಪ್ರಾರಂಭಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಪ್ರಯಾಣವನ್ನು ಮತ್ತಷ್ಟು ಸುಗಮ ಹಾಗೂ ನಾಗರಿಕ ಸ್ನೇಹಿಯಾಗಿಸುವ ಉದ್ದೇಶದಿಂದ ಇದೀಗ ಲೋಕಲ್ ಟೋಲ್ ವ್ಯಾಪ್ತಿಯನ್ನ ವಿಸ್ತರಿಸಲಾಗಿದೆ.
ತಂತ್ರಜ್ಞಾನದ ಬಳಕೆಯ ಮೂಲಕ ಟೋಲ್ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಪ್ರಯತ್ನ ಇದಾಗಿದೆ.

20 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ ಸೌಲಭ್ಯ
ಡಿಜಿಟಲ್ ಲೋಕಲ್ ಪಾಸ್ ವ್ಯವಸ್ಥೆಯ ಅಡಿ, ಯಾವುದೇ ಟೋಲ್ ಪ್ಲಾಜಾದ (Toll Plaza) 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವವರು ‘ರಾಜಮಾರ್ಗ ಯಾತ್ರಾ’ ಮೊಬೈಲ್ ಆ್ಯಪ್ ಮೂಲಕ ಸ್ಥಳೀಯ ಪಾಸ್‌ಗೆ ಅರ್ಜಿ ಸಲ್ಲಿಸಬಹುದು.
ಈ ಪಾಸ್ ಬಳಕೆದಾರರಿಗೆ ತಿಂಗಳಿಗೆ ಆಯಾ ಟೋಲ್ ಪ್ಲಾಜಾಗಳಲ್ಲಿ 1 ತಿಂಗಳ ಅವಧಿಯಲ್ಲಿ ಅನಿಯಮಿತವಾಗಿ (ಎಷ್ಟುಬಾರಿ ಬೇಕಾದ್ರೂ) ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತದೆ.
ಈ ಹಿಂದೆ ಸ್ಥಳೀಯ ಪಾಸ್‌ಗಾಗಿ ಅರ್ಜಿ ಸಲ್ಲಿಸುವವರು ಸಂಬಂಧಿತ ಟೋಲ್ ಪ್ಲಾಜಾಗೆ ಖುದ್ದಾಗಿ ತೆರಳಿ ತಮ್ಮ ನಿವಾಸದ ವಿಳಾಸವನ್ನ ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. ಇದೀಗ ಡಿಜಿಟಲ್ ವ್ಯವಸ್ಥೆಯಿಂದ ಈ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ.

