ಆಮ್ಸ್ಟರ್‌ವೀನ್: ನೆದರ್ಲೆಂಡ್‌ನಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್(Men’s Hockey World Cup) 2026ರ ಪೂಲ್ ‘ಡಿ’ ಹಂತದ ಅತ್ಯಂತ ರೋಚಕ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ(Pakistan) ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ(India) ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದೆ.
ವ್ಯಾಗ್ನರ್ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ 5-3 ಗೋಲುಗಳ ಅಂತರದಿಂದ ಪಾಕಿಸ್ತಾನವನ್ನು ಮಣಿಸಿ ಟೂರ್ನಿಯಿಂದಲೇ ಹೊರದಬ್ಬಿದೆ.
ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಅಭಿಷೇಕ್ ತಲಾ ಎರಡು ಗೋಲು ಬಾರಿಸಿ ಗೆಲುವಿನ ರೂವಾರಿಯಾದರೆ, ಹಾರ್ದಿಕ್ ಸಿಂಗ್ ಒಂದು ಗೋಲು ದಾಖಲಿಸಿ ಗೆಲುವಿಗೆ ನೆರವಾದರು. ಪಾಕಿಸ್ತಾನದ ಪರ ಶಹೀದ್ ಹನ್ನಾನ್ ಎರಡು ಗೋಲು ಹಾಗೂ ಸುಫ್ಯಾನ್ ಖಾನ್ ಒಂದು ಗೋಲು ಗಳಿಸಿದರಾದರೂ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.
𝗔 𝘄𝗶𝗻 𝘀𝗵𝗮𝗿𝗲𝗱 𝘄𝗶𝘁𝗵 𝘁𝗵𝗼𝘀𝗲 𝘄𝗵𝗼 𝗺𝗮𝗱𝗲 𝘁𝗵𝗲 𝗻𝗼𝗶𝘀𝗲! 💙
After getting the job done against Pakistan, our boys head over to the stands to acknowledge the incredible support. 🙌
Together on the pitch. Together in the stands. Onwards, India! 🏑… pic.twitter.com/LWV9KhtDlp
— Hockey India (@TheHockeyIndia) August 19, 2026
ಇಂಗ್ಲೆಂಡ್ ವಿರುದ್ಧದ ಹಿಂದಿನ ಪಂದ್ಯದ ಸೋಲಿನ ಆಘಾತದಿಂದ ಅದ್ಭುತವಾಗಿ ಪುಟಿದೆದ್ದ ಭಾರತ ತಂಡ, ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಎರಡನೇ ಕ್ವಾರ್ಟರ್ ವೇಳೆಗೆ 3-0 ಅಂತರದ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ನಂತರ ಪಾಕಿಸ್ತಾನ ಎರಡು ಗೋಲು ಬಾರಿಸಿ ಕಮ್‌ಬ್ಯಾಕ್ ಮಾಡಲು ಯತ್ನಿಸಿದರೂ, ಭಾರತ ಮತ್ತೆ ಗೋಲು ದಾಖಲಿಸಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತು. ಅಂತಿಮವಾಗಿ 5-3 ಅಂತರದಿಂದ ಪಂದ್ಯ ಗೆದ್ದು ಸಂಭ್ರಮಿಸಿತು.
ಈ ಗೆಲುವಿನೊಂದಿಗೆ ಭಾರತ ತಂಡವು ಪೂಲ್ ‘ಡಿ’ನಲ್ಲಿ ಒಟ್ಟು 6 ಅಂಕಗಳನ್ನು ಪಡೆದು ಎರಡನೇ ಸ್ಥಾನದೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಮತ್ತೊಂದೆಡೆ ಎರಡು ಸೋಲು ಮತ್ತು ಒಂದು ಡ್ರಾನೊಂದಿಗೆ ನಿರಾಸೆ ಅನುಭವಿಸಿದ ಪಾಕಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.
ಮುಂದಿನ ಹಂತದಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ಹಾಗೂ ಅರ್ಜೆಂಟೀನಾ ಅಥವಾ ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದ್ದು ಈ ಪಂದ್ಯಗಳು ಆಗಸ್ಟ್ 22 ಮತ್ತು ಆಗಸ್ಟ್ 24 ರಂದು ನಡೆಯಲಿವೆ.


