– ನಾಳೆ ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶ
ಬೆಂಗಳೂರು/ ರಾಮನಗರ: ರಾಮನಗರ ಜಿಲ್ಲೆಯ ಬಿಡದಿ(Bidadi) ಸಮೀಪದ ಹೆಜ್ಜಾಲ ಬಳಿ ಪತ್ತೆಯಾಗಿರುವ ನಕಲಿ ಔಷಧಿ(Fake Medicine) ದಂಧೆಯ ತನಿಖೆ ತೀವ್ರಗೊಂಡಿದ್ದು, ಬೆಚ್ಚಿಬೀಳಿಸುವ ಸತ್ಯಗಳು ಹೊರಬಿದ್ದಿವೆ. ಕ್ಯಾನ್ಸರ್ (Cancer) ಹಾಗೂ ಐಸಿಯುನಲ್ಲಿ (ICU) ಬಳಸುವಂತಹ ಜೀವ ರಕ್ಷಕ ಔಷಧಿಗಳನ್ನೇ ನಕಲು ಮಾಡಿ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್‌ಗಳಿಗೆ ಸರಬರಾಜು ಮಾಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ದಂಧೆಯ ಅಡ್ಡೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಬರೋಬ್ಬರಿ 5 ಕೋಟಿ ರೂ. ಮೌಲ್ಯದ ನಕಲಿ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ. ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸುವ ಹಾಗೂ ತೀವ್ರ ನಿಗಾ ಘಟಕದಲ್ಲಿ ರೋಗಿಗಳಿಗೆ ನೀಡುವ ಔಷಧಿಗಳನ್ನೇ ಇವರು ನಕಲು ಮಾಡಿದ್ದಾರೆ.
ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಕಳಪೆ ಮತ್ತು ನಕಲಿ ಔಷಧಿಗಳನ್ನು ತರಿಸಿ, ಅವುಗಳಿಗೆ ಖ್ಯಾತ ಬಹುರಾಷ್ಟ್ರೀಯ ಕಂಪನಿಗಳ (MNC) ನಕಲಿ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು. ಹೆಜ್ಜಾಲ ವ್ಯಾಪ್ತಿಯ ಸಿದ್ದಯ್ಯ ಎಂಬುವರಿಗೆ ಸೇರಿದ ಫಾರ್ಮ್‌ಹೌಸ್ ಅನ್ನು ಲೀಸ್‌ಗೆ ಪಡೆದು, ಅಲ್ಲಿಯೇ ನಕಲಿ ಲೇಬಲಿಂಗ್ ಮತ್ತು ಪ್ಯಾಕಿಂಗ್ ಕಾರ್ಯ ನಡೆಸಲಾಗುತ್ತಿತ್ತು.
ಈ ಜಾಲದ ಪ್ರಮುಖ ಸೂತ್ರಧಾರ ಬೆಂಗಳೂರು ಮೂಲದ, ಫಾರ್ಮಾಸಿಸ್ಟ್ ಹಿನ್ನೆಲೆಯುಳ್ಳ ಪ್ರಶಾಂತ್ ಎಂಬಾತನಾಗಿದ್ದು, ಈತ ಪ್ರಸ್ತುತ ವಿದೇಶದಲ್ಲಿದ್ದುಕೊಂಡೇ ದಂಧೆ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯವಾಗಿ ಆತನ ಸಂಬಂಧಿ ತೇಜಸ್ ಎಂಬಾತ ಲೇಬಲಿಂಗ್ ಕೆಲಸಗಳನ್ನು ನಿರ್ವಹಿಸುತ್ತಿದ್ದ. ಸದ್ಯ ಫಾರ್ಮ್‌ಹೌಸ್ ನೋಡಿಕೊಳ್ಳುತ್ತಿದ್ದ ರಾಮನಗರ ಮೂಲದ ಪ್ರಭುದೇವ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್‌ಗೌಡ ಮಾಹಿತಿ ನೀಡಿದ್ದಾರೆ.
SIT ತನಿಖೆಗೆ ಆದೇಶ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಆರೋಗ್ಯ ಸಚಿವ ಖಾದರ್, ಜಪ್ತಿ ಮಾಡಲಾದ ಔಷಧಿಗಳ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ. ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಈ ಜಾಲ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಪಾರದರ್ಶಕ ತನಿಖೆಗಾಗಿ ಪೊಲೀಸ್ ಹಾಗೂ ಡ್ರಗ್ ಕಂಟ್ರೋಲರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸುವುದಾಗಿ ತಿಳಿಸಿದ್ದಾರೆ. ಜತೆಗೆ ಈ ಅಂತರರಾಜ್ಯ ನಕಲಿ ಔಷಧಿ ಮಾಫಿಯಾ ಕುರಿತು ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದು ಎಚ್ಚರಿಕೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ʻವಂದೇ ಮಾತರಂʼ 2 ಚರಣಗಳನ್ನಷ್ಟೇ ಹಾಡಲು CWC ಸಭೆಯಲ್ಲಿ ಕಾಂಗ್ರೆಸ್ ನಿರ್ಣಯ
ನಕಲಿ ಔಷಧಿ ಜಾಲ; ಜಪ್ತಿ ಔಷಧಿಗಳ ವಿವರ
ಸೆಫಿಯಾವಿಜೆಂಟ್ 2.5 ಇಂಜೆಕ್ಷನ್
* 5,640 ಬಾಟಲ್ ಸೀಜ್
* ಸುಮಾರು 3.38 ಕೋಟಿ ರೂ. ಮೌಲ್ಯ
* ಬ್ಯಾಕ್ಟಿರಿಯಲ್ ಇನ್ಫೆಕ್ಷನ್ ಇಂಜೆಕ್ಷನ್ ( ಗಂಭೀರ ಬ್ಯಾಕ್ಟೀರಿಯಾದ ಸೋಂಕು, ನ್ಯುಮೋನಿಯಾ, ಜಟಿಲವಾದ ಮೂತ್ರನಾಳದ ಸೋಂಕು, ಒಳ-ಹೊಟ್ಟೆಯ ಸೋಂಕುಗಳು)
ಹಿಜ್ಲಾಮ್ ಇಂಜೆಕ್ಷನ್
* 1,531 ಬಾಟಲ್ ಸೀಜ್
* ಸುಮಾರು 52.24 ಲಕ್ಷ ರೂ. ಮೌಲ್ಯ
* ಜನರಲ್ ಅನಸ್ತೇಷಿಯಾ ಇಂಜೆಕ್ಷನ್ (ಇಮ್ಯುನೊಗ್ಲಾಬ್ಯುಲಿನ್, ಅಸ್ವಸ್ಥತೆ)
ಕ್ಸಾವಿತಾಜ್ ಇಂಜೆಕ್ಷನ್
* 470 ಬಾಟಲ್ ಸೀಜ್
* 27.49 ಲಕ್ಷ ರೂ. ಮೌಲ್ಯ
* ಆ್ಯಂಟಿ ಬಯೋಟಿಕ್ಸ್ ಇಂಜೆಕ್ಷನ್ (ಬಹು-ಔಷಧ ನಿರೋಧಕಕ್ಕೆ ಪ್ರತಿಜೀವಕ, ಒಳ-ಹೊಟ್ಟೆಯ ಸೋಂಕುಗಳು, ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳ ನಿವಾರಕ )
ಎಮ್ಲ್ಡೆಯೋ ಇಂಜೆಕ್ಷನ್
* 264 ಬಾಟಲ್ ಸೀಜ್
* 20.59 ಲಕ್ಷ ರೂ. ಮೌಲ್ಯ
* ಆ್ಯಂಟಿ ಬಯೋಟಿಕ್ಸ್ ಇಂಜೆಕ್ಷನ್ (ಬ್ಯಾಕ್ಟೀರಿಯಾದಿಂದ ಉಂಟಾಗುವ ಸಂಕೀರ್ಣ ಸೋಂಕುಗಳಿಗೆ ಪ್ರತಿಜೀವಕ, ಸಂಕೀರ್ಣವಾದ ಒಳ-ಹೊಟ್ಟೆಯ ಸೋಂಕುಗಳು ನಿವಾರಕ )
ಝವಿಸೆಫ್ಟಾ ಇಂಜೆಕ್ಷನ್
* 165 ಬಾಟಲ್ ಸೀಜ್
* 5.45 ಲಕ್ಷ ರೂ. ಮೌಲ್ಯ
* ಆ್ಯಂಟಿ ಬಯೋಟಿಕ್ಸ್ ಇಂಜೆಕ್ಷನ್ ( ಸೋಂಕುಗಳಿಗೆ ಪ್ರತಿಜೀವಕ, ಒಳಸೋಂಕುಗಳ ನಿರೋಧಕ)
ಟೈಗೆಸೈಕ್ಲಿನ್ ಇಂಜೆಕ್ಷನ್
* 44 ಬಾಟಲ್ ಸೀಜ್
* 2.06 ಲಕ್ಷ ರೂ. ಮೌಲ್ಯ
( ಚರ್ಮ ಸೋಂಕುಗಳಿಗೆ ಬಳಕೆ, ಒಳ-ಹೊಟ್ಟೆಯ ಸೋಂಕುಗಳಿಗೆ ಬಳಕೆ, ಬ್ಯಾಕ್ಟೀರಿಯಾದ ಸೋಂಕುಗಳಿಗೆ ನಿರೋಧಕ)
ಅಜ್ಟ್ರಿಯೊನಮ್ ಇಂಜೆಕ್ಷನ್
* 190 ಬಾಟಲ್ ಸೀಜ್
* 1.48 ಲಕ್ಷ ರೂ. ಮೌಲ್ಯ
(ಮೂತ್ರದ ಸೋಂಕುಗಳು, ನ್ಯುಮೋನಿಯಾ, ಪೆನ್ಸಿಲಿನ್, ಸೆಫಲೋಸ್ಪೊರಿನ್‌ಗಳಿಗೆ, ಅಲರ್ಜಿ ಇರುವ ರೋಗಿಗಳಿಗೆ ನೀಡಲಾಗುತ್ತೆ, ಒಳ-ಹೊಟ್ಟೆಯ ಸೋಂಕುಗಳಿಗೆ ಬಳಕೆ)
* ಟ್ರೆಜಾಮ್ ಇಂಜೆಕ್ಷನ್
* 50 ಬಾಟಲ್ ಸೀಜ್
* 1 ಲಕ್ಷ ರೂ. ಮೌಲ್ಯ
(ಟೈಫಾಯಿಡ್ ಜ್ವರ, ಮೆನಿಂಜೈಟಿಸ್, ನ್ಯುಮೋನಿಯಾ, ಯುಟಿಐ, ಗೊನೊರಿಯಾ, ಶಸ್ತ್ರಚಿಕಿತ್ಸೆಯ ಸೋಂಕುಗಳ ನಿವಾರಣೆಗೆ ಬಳಕೆ, ಮೂಳೆ ಮತ್ತು ಕೀಲು ಸೋಂಕುಗಳ ನಿವಾರಣೆಗೆ ಬಳಕೆ)
ಯುಟಿ ಖಾದರ್ ಹೇಳಿದ್ದೇನು?
ಬೇರೆ ರಾಷ್ಟ್ರ, ರಾಜ್ಯಗಳ ನಕಲಿ ಔಷಧಿಗಳಿಂದ ಮಾತ್ರೆ ತಂದು ಇಲ್ಲಿ ಮಲ್ಟಿನ್ಯಾಷನಲ್ ಕಂಪನಿ ಲೇಬಲ್ ಹಾಕಿದ್ದಾರೆ. ಮೆಡಿಕಲ್ ಶಾಪ್, ಆಸ್ಪತ್ರೆಗೆ ರವಾನೆ ಆಗಿದೆ. ಐಸಿಯುನಲ್ಲಿ ಬಳಸುವ ಔಷಧಿ ಕೂಡ ನಕಲಿ ಮಾಡಿದ್ದಾರೆ. ಕೇಂದ್ರಕ್ಕೆ, ಹಿಮಾಚಲಪ್ರದೇಶ, ಬೇರೆ ರಾಜ್ಯಗಳಿಗೆ ಮಾಹಿತಿ ಕೊಡ್ತೆವೆ. ಮುಖ್ಯ ಮಂತ್ರಿಗೆ ಮತ್ತೆ ಗೃಹ ಸಚಿವರಿಗೆ ಮಾಹಿತಿ ಕೊಡ್ತೆವೆ. ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡಬೇಕು. ಯಾವೆಲ್ಲ ಫಾರ್ಮಸಿಗೆ, ಮೆಡಿಕಲ್ ಶಾಪ್, ಯಾವೆಲ್ಲ ಐಸಿಯುನಲ್ಲಿ ಮೆಡಿಸನ್ ಕೊಟ್ಟಿದ್ದಾರೆ. ತನಿಖೆ ಮಾಡಬೇಕು. ಅಧಿವೇಶನದಲ್ಲಿ ಚರ್ಚೆ ಮಾಡ್ತೆನೆ. ವಿಶೇಷ ತನಿಖೆ ಆಗುತ್ತೆ. ಉನ್ನತ ಮಟ್ಟದ ತನಿಖೆ ಆಗಬೇಕು.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಯುಟಿ ಖಾದರ್ ಅವರು ಮಾಹಿತಿ ನೀಡಿದ್ದಾರೆ. ಖಾದರ್ ಜೊತೆ ಚರ್ಚೆ ನಡೆಸಿದ್ದೇವೆ. ಜಂಟಿಯಾಗಿ ಎಸ್‌ಐಟಿ ರಚನೆ ಮಾಡೋ ಬಗ್ಗೆ ಚರ್ಚಿಸಿದ್ದೇವೆ ಇವತ್ತು ಅಥವಾ ನಾಳೆ ರಚನೆ ಮಾಡುತ್ತೇವೆ. ಹೆಲ್ತ್ ಡೆಪಾರ್ಟ್ಮೆಂಟ್, ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡುತ್ತೇವೆ.
ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಹೇಳಿದ್ದೇನು?
ಆರೋಪಿಗಳು ತೆಲಂಗಾಣ ಹಾಗೂ ಹಿಮಾಚಲ ಪ್ರದೇಶಗಳಿಂದ ಅತ್ಯಂತ ಕಡಿಮೆ ಬೆಲೆಯ ಮತ್ತು ಹೈ-ಡೋಸೇಜ್ ಆಂಟಿಬಯೋಟಿಕ್ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದರು. ಈ ಸಾಧಾರಣ ಔಷಧಿಗಳಿಗೆ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಗಳ ನಕಲಿ ಲೇಬಲ್ ಹಾಗೂ ಪ್ಯಾಕಿಂಗ್ ಅಂಟಿಸಿ, ದುಬಾರಿ ಬೆಲೆಗೆ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು. +ಈ ನಕಲಿ ಔಷಧಿಗಳನ್ನು ಬೆಂಗಳೂರಿನ ಚಿಕ್ಕಪೇಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಸರಬರಾಜು ಮಾಡಿರುವ ಶಂಕೆ ವ್ಯಕ್ತವಾಗಿದೆ.

