ನವದೆಹಲಿ: ಭಾರತೀಯ ಪೊಲೀಸ್ (Indian Police) ವ್ಯವಸ್ಥೆಯು ಈಗ ಸಂಪೂರ್ಣ ಹೈಟೆಕ್ ರೂಪ ಪಡೆದುಕೊಳ್ಳುತ್ತಿದೆ. ಇನ್ಮುಂದೆ ರಸ್ತೆಯಲ್ಲಿ ಸಿಗುವ ಶಂಕಿತ ವ್ಯಕ್ತಿ ಅಪರಾಧಿಯೇ ಅಥವಾ ಅಲ್ಲವೇ ಎಂಬುದನ್ನು ಪೊಲೀಸರು ಕೇವಲ 35 ಸೆಕೆಂಡುಗಳಲ್ಲಿ ಪತ್ತೆಹಚ್ಚಬಹುದು.
ಹೌದು. ದೇಶಾದ್ಯಂತ ಇರುವ 1.3 ಕೋಟಿಗೂ ಹೆಚ್ಚು ಅಪರಾಧಿಗಳ ಬೆರಳಚ್ಚು (Fingerprint) ಡೇಟಾಬೇಸ್ ಅನ್ನು ಪೊಲೀಸರ ಸ್ಮಾರ್ಟ್‌ಫೋನ್‌ಗೇ ತಂದುಕೊಡುವ ಅತ್ಯಾಧುನಿಕ ‘ಅಭಿಜ್ಞಾನ್’ ಆ್ಯಪ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ರಸ್ತೆ ಬದಿಯಲ್ಲೇ ಶಂಕಿತರ ಹಿನ್ನೆಲೆಯನ್ನು ಜಾಲಾಡಬಲ್ಲ ಈ ತಂತ್ರಜ್ಞಾನ, ತನಿಖಾ ಸಂಸ್ಥೆಗಳ ಪಾಲಿಗೆ ಹೊಸ ಬ್ರಹ್ಮಾಸ್ತ್ರವಾಗಿ ಹೊರಹೊಮ್ಮಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಅಭಿಜ್ಞಾನ್ (Abhigyan) ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಲೋಕಾರ್ಪಣೆಗೊಳಿಸಿದ್ದಾರೆ. ದೆಹಲಿಯಲ್ಲಿ ನಡೆದ 26ನೇ ಅಖಿಲ ಭಾರತ ಬೆರಳಚ್ಚು ಸಮ್ಮೇಳನದಲ್ಲಿ ಈ ಅಪ್ಲಿಕೇಶನ್ ಲೋಕಾರ್ಪಣೆಗೊಳಿಸಲಾಯಿತು.
ಏನಿದು ಅಭಿಜ್ಞಾನ್ ಆಪ್?
ಇದು ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗಾಗಿ ಸಿದ್ಧಪಡಿಸಲಾದ ವಿಶೇಷ ಮೊಬೈಲ್ ಆಪ್ ಆಗಿದೆ. ಪೊಲೀಸರು ರಸ್ತೆಯಲ್ಲಿ ಅಥವಾ ವಾಹನ ತಪಾಸಣೆ ನಡೆಸುವಾಗ ಶಂಕಿತ ವ್ಯಕ್ತಿಯ ಹೆಬ್ಬೆರಳಿನ ಗುರುತನ್ನು ಸ್ಕ್ಯಾನ್ ಮಾಡಿದರೆ, ಕೇವಲ 35 ಸೆಕೆಂಡುಗಳಲ್ಲಿ ಆ ವ್ಯಕ್ತಿ ಈ ಹಿಂದೆ ಯಾವುದಾದರೂ ಅಪರಾಧ ಮಾಡಿದ್ದಾನೆಯೇ ಎಂಬ ಸಂಪೂರ್ಣ ಮಾಹಿತಿ ಮೊಬೈಲ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ಈ ಆಪ್ ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆಗೆ (NAFIS) ಸಂಪರ್ಕ ಹೊಂದಿದೆ. ಇದರಲ್ಲಿ ದೇಶದ ಸುಮಾರು 1.29 ಕೋಟಿ ಅಪರಾಧಿಗಳ ಬೆರಳಚ್ಚು ದಾಖಲೆಗಳಿವೆ. ಇದರಿಂದಾಗಿ ಬೇರೆ ರಾಜ್ಯಗಳಿಗೆ ಓಡಿಹೋಗುವ ಅಥವಾ ಹೆಸರು, ರೂಪ ಬದಲಾಯಿಸಿಕೊಂಡು ಓಡಾಡುವ ಹಳೆಯ ಅಪರಾಧಿಗಳನ್ನು ತಕ್ಷಣವೇ ಗುರುತಿಸಲು ಸಾಧ್ಯವಾಗುತ್ತದೆ. ಮನುಷ್ಯನ ಬೆರಳಚ್ಚು ಎಂದಿಗೂ ಬದಲಾಗುವುದ ಕಾರಣ ಅಪರಾಧಿಗಳು ಎಲ್ಲೇ ಅಡಗಿ ಕೃತ್ಯ ನಡೆಸಿದರೂ ಸುಲಭವಾಗಿ ಸಿಕ್ಕಿ ಬೀಳಲಿದ್ದಾರೆ.
‘ಅಭಿಜ್ಞಾನ್’ ಆಪ್ ಜೊತೆಗೆ, ಅಪರಾಧ ಮುಕ್ತ ಭಾರತ ನಿರ್ಮಾಣಕ್ಕಾಗಿ ಇನ್ನೂ ಮೂರು ಪ್ರಮುಖ ಡಿಜಿಟಲ್ ವ್ಯವಸ್ಥೆಗಳನ್ನು ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 2 ಕೋಟಿ ವಿಮೆಗಾಗಿ ಗಂಡನನ್ನು ಕೊಂದ ಮಗಳು ಅರೆಸ್ಟ್ – ಊರಲ್ಲಿ ತಲೆ ಎತ್ತಲಾಗದೆ ತಾಯಿ ಆತ್ಮಹತ್ಯೆ
CrPI ಆಪ್: ತನಿಖಾ ಪ್ರಕ್ರಿಯೆಗಳನ್ನು ಸುಲಭಗೊಳಿಸುವ ಆಪ್
ಇ-ಪ್ರಾಸಿಕ್ಯೂಷನ್ 2.0 (e-Prosecution 2.0): ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಇದು ಸಹಾಯ ಮಾಡುತ್ತದೆ.
ಇ-ಫೋರೆನ್ಸಿಕ್ 2.0 (e-Forensics 2.0): ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಅಪರಾಧದ ಪುರಾವೆಗಳನ್ನು ವೇಗವಾಗಿ ಕಲೆಹಾಕಲು ನೆರವಾಗುತ್ತದೆ.
ಉದ್ದೇಶವೇನು?
ಎಫ್‌ಐಆರ್ (FIR) ದಾಖಲಾದ ದಿನದಿಂದ ಹಿಡಿದು ಕೋರ್ಟ್‌ನಲ್ಲಿ ಶಿಕ್ಷೆಯಾಗುವವರೆಗಿನ ಇಡೀ ಪ್ರಕ್ರಿಯೆಯನ್ನು 3 ವರ್ಷಗಳ ಒಳಗಾಗಿ ಮುಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕಾಗಿ ತನಿಖೆಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಈ ಆಪ್‌ಗಳನ್ನು ತರಲಾಗಿದೆ.
ಈ ಅಪ್ಲಿಕೇಶನ್‌ಗಳು ಸಾರ್ವಜನಿಕರ ಬಳಕೆಗೆ ಸಿಗುವುದಿಲ್ಲ. ಕೇವಲ ಪೊಲೀಸ್ ಅಧಿಕಾರಿಗಳು ಮತ್ತು ತನಿಖಾ ಸಂಸ್ಥೆಗಳ ಬಳಕೆಗೆ ಮಾತ್ರ ಲಭ್ಯವಿರುತ್ತವೆ. ತನಿಖೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಮತ್ತು ಕಾಗದದ ಕೆಲಸಗಳನ್ನು ಕಡಿಮೆ ಮಾಡಲು ಈ ಡಿಜಿಟಲ್ ವ್ಯವಸ್ಥೆಯನ್ನು ತರಲಾಗಿದೆ.
