ಬೆಂಗಳೂರು: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು (Praveen Nettaru) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿಯಾಗಿದ್ದ ನೌಶಾದ್‌ನನ್ನು (32) ಬೆಂಗಳೂರಿನಲ್ಲಿ ಬಂಧಿಸಿದ್ದರೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರಸ್ತೆ ನಿವಾಸಿ ಅಬ್ದುಲ್ ನಾಸಿರ್‌ನನ್ನು (41) ಕೇರಳದ ಕೊಚ್ಚಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಇವರ ಮೇಲಿರುವ ಆರೋಪ ಎನು?
ಕೃತ್ಯ ಎಸಗಿದ್ದ ಮುಖ್ಯ ಶೂಟರ್‌ಗಳು ಹಾಗೂ ಪ್ರಮುಖ ಆರೋಪಿಗಳಿಗೆ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಇವರು ಸಹಾಯ ಮಾಡಿದ್ದರು. ಆರೋಪಿಗಳಿಗೆ ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಈರೋಡ್‌ನಲ್ಲಿ ಸುರಕ್ಷಿತವಾಗಿ ಅಡಗಿಕೊಳ್ಳಲು ರಹಸ್ಯ ಅಡಗುತಾಣಗಳನ್ನು ವ್ಯವಸ್ಥೆ ಮಾಡಿಕೊಟ್ಟ ಗಂಭೀರ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ಒಟ್ಟು 27 ಜನ ಆರೋಪಿಗಳ ಪಟ್ಟಿಯಲ್ಲಿ ಇವರ ಹೆಸರನ್ನೂ ಸೇರಿಸಲಾಗಿತ್ತು.
ಬಹುಮಾನ ಘೋಷಿಸಿದ್ದ ಎನ್ಐಎ:
ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ಒಬ್ಬೊಬ್ಬರನ್ನೇ ಜೈಲಿಗಟ್ಟಿದ್ದರು. ಆದರೆ ಕೊನೆಯಲ್ಲಿ ಆರು ಮಂದಿ ಆರೋಪಿಗಳು ಮಾತ್ರ ಸಿಗದೆ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: Bengaluru | ಶೌಚಕ್ಕೆ ಹೋಗಬೇಕೆಂದು ಒಂಟಿ ಮಹಿಳೆ ಮನೆಗೆ ನುಗ್ಗಿದ್ದ ಡೆಲಿವರಿ ಬಾಯ್ ಅರೆಸ್ಟ್
ಏನಿದು ಪ್ರಕರಣ?
2022ರ ಜುಲೈ 26ರಂದು ಸುಳ್ಯ (Sullia) ತಾಲೂಕಿನ ಬೆಳ್ಳಾರೆಯಲ್ಲಿ (Bellare) ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ಕಾರ್ಯಕರ್ತರು, ಹಿಂದೂ ಮುಖಂಡರನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಸಂಚಿನ ಭಾಗವಾಗಿ ಈ ಟಾರ್ಗೆಟ್ ಹತ್ಯೆ ನಡೆಸಿದ್ದರು ಎಂದು ಎನ್‌ಐಎ ತನ್ನ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.
