ಗಾನಕೋಗಿಲೆ ಎಸ್. ಜಾನಕಿ (S Janaki) ಅವರ ನಿಧನ ಸಂಗೀತ ಲೋಕವನ್ನು ದುಃಖದಲ್ಲಿ ಮುಳುಗಿಸಿದೆ. ಹಲವು ದಶಕಗಳ ಕಾಲ ತಮ್ಮ ಧ್ವನಿಯಿಂದ ಕೋಟ್ಯಂತರ ಜನರ ಮನ ಗೆದ್ದಿದ್ದ ಜಾನಕಮ್ಮ, ಬದುಕಿನ ಕೊನೆಯ ದಿನಗಳಲ್ಲಿ ವೈಯಕ್ತಿಕ ನೋವು ಮತ್ತು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಜನವರಿ 22ರಂದು ಅವರ ಮಗ ಮುರಳಿ ಕೃಷ್ಣ(Murali Krishna) ಹೃದಯಾಘಾತದಿಂದ (Heart attack) ನಿಧನರಾಗಿದ್ದರು. ಮಗನ ಅಗಲಿಕೆ ಜಾನಕಮ್ಮ ಅವರನ್ನು ತೀವ್ರವಾಗಿ ಕಾಡಿತ್ತು ಎನ್ನಲಾಗುತ್ತಿದೆ. ಆ ನೋವಿನಿಂದ ಅವರು ಮಾನಸಿಕವಾಗಿ ತುಂಬಾ ಕುಗ್ಗಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಇದರ ಜೊತೆಗೆ ವಯೋಸಹಜ ಸಮಸ್ಯೆಗಳೂ ಅವರನ್ನು ಕಾಡುತ್ತಿದ್ದವು. ಬಿಪಿ ಮತ್ತು ಶುಗರ್‌ನಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿದ್ದರೂ, ಬೇರೆ ಯಾವುದೇ ಗಂಭೀರ ಕಾಯಿಲೆ ಅವರಿಗೆ ಇರಲಿಲ್ಲ. ಶನಿವಾರ ಸಂಜೆ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳಿದಿದ್ದಾರೆ ಜಾನಕಮ್ಮ.ಇದನ್ನೂ ಓದಿ: ‘ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ’ – ಎಸ್. ಜಾನಕಿ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ ಸಂತಾಪ
ಬಿಳಿ ಬಟ್ಟೆ ಧರಿಸಲು ಕಾರಣ
ಹಿಂದಿನ ಸಂದರ್ಶನವೊಂದರಲ್ಲಿ ಜಾನಕಮ್ಮ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಬಳಿಕ ಬಣ್ಣದ ಸೀರೆ ಧರಿಸುವುದನ್ನು ಬಿಟ್ಟಿದ್ದಾಗಿ ಹೇಳಿದ್ದರು. ಅಂದಿನಿಂದ ಬಿಳಿ ಬಟ್ಟೆಗಳನ್ನು ಮಾತ್ರ ಧರಿಸುತ್ತಿದ್ದ ಅವರು, ರೇಷ್ಮೆ ಸೀರೆ ಮತ್ತು ದೊಡ್ಡ ಬೊಟ್ಟು ಧರಿಸುವುದನ್ನೂ ನಿಲ್ಲಿಸಿದ್ದಾಗಿ ತಿಳಿಸಿದ್ದರು.
ಆಧ್ಯಾತ್ಮದತ್ತ ಒಲವು
ಜೀವನದ ಬಗ್ಗೆ ಮಾತನಾಡಿದ್ದ ಅವರು, ಈಗ ನನಗೆ ಯಾವುದೇ ಆಸೆಗಳಿಲ್ಲ. ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ. ನನಗೆ ಉಳಿದಿರುವ ಒಂದೇ ಆಸೆ ‘ನಾನು ಯಾರು?’ ಎಂಬುದನ್ನು ತಿಳಿದುಕೊಳ್ಳುವುದು ಎಂದು ಹೇಳಿದ್ದರು. ಮನುಷ್ಯನ ನಿಜವಾದ ಅಸ್ತಿತ್ವ ಪರಮಾತ್ಮನಲ್ಲಿ ಇದೆ ಎಂಬ ಆಧ್ಯಾತ್ಮಿಕ ನಂಬಿಕೆಯನ್ನು ಕೂಡ ಅವರು ಹಂಚಿಕೊಂಡಿದ್ದರು.
ಸರಳತೆ, ಸಂಗೀತ ಮತ್ತು ಆಧ್ಯಾತ್ಮವನ್ನು ಜೀವನದ ಭಾಗವಾಗಿಸಿಕೊಂಡಿದ್ದ ಜಾನಕಮ್ಮ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಧ್ವನಿ, ಅವರ ಹಾಡುಗಳು ಮತ್ತು ಅವರು ಹೇಳಿದ ಜೀವನದ ಮಾತುಗಳು ಸಂಗೀತ ಪ್ರೇಮಿಗಳ ಮನದಲ್ಲಿ ಎಂದೆಂದಿಗೂ ಜೀವಂತವಾಗಿರಲಿವೆ.ಇದನ್ನೂ ಓದಿ: ಬಿಳಿ ಸೀರೆಗೆ ಗುಲಾಬಿ ಮುಡಿಸುತ್ತಿದ್ದ ಜಾನಕಿ!
