ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ‘ಕಬ್ಜ’ ಸಿನಿಮಾ ಇನ್ನೂ ಸಾಕಷ್ಟು ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಕನ್ನಡ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ರಿಲೀಸ್ ಆದ ಎರಡನೇ ದಿನಕ್ಕೆ ನೂರು ಕೋಟಿ ಬಾಚುವ ಮೂಲಕ ಕೆಜಿಎಫ್ (KGF), ಕಾಂತಾರ (Kantara) ಸಿನಿಮಾಗಳ ಬಾಕ್ಸ್ ಆಫೀಸ್ ರೇಕಾರ್ಡ್ ಬ್ರೇಕ್ ಮಾಡಿತ್ತು. ಕಬ್ಜ ಸಿನಿಮಾ ತಂಡದಿಂದ ಮತ್ತಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ.
ಸಿನಿಮಾದ ಯಶಸ್ಸನ್ನು ಪ್ರೇಕ್ಷಕರಿಗೆ ಅರ್ಪಿಸಿ ನಿರ್ದೇಶಕ ಆರ್.ಚಂದ್ರು (R. Chandru) ‘ಕಬ್ಜ 2’ (Kabzaa 2) ಸಿನಿಮಾದ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಟೀಮ್ ಕಟ್ಟಿಕೊಂಡು ಕಥೆ ವಿಸ್ತರಣೆಯಲ್ಲಿ ಚಂದ್ರು ತೊಡಗಿದ್ದಾರೆ ಎನ್ನುವುದು ಅವರ ಆಪ್ತರ ಮಾಹಿತಿ. ಈ ಬಾರಿ ಹತ್ತು ಹಲವು ವಿಶೇಷಗಳೊಂದಿಗೆ ಕಬ್ಜ 2 ತಯಾರಾಗಲಿದೆಯಂತೆ. ಅಲ್ಲದೇ, ಭಾರತೀಯ ಸಿನಿಮಾ ರಂಗದ ಹೆಸರಾಂತ ಕಲಾವಿದರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?
ಭಾರತೀಯ ಚಿತ್ರರಂಗದಲ್ಲಿ ಒಂದು ಸಂಪ್ರದಾಯವಿದೆ. ಪಾರ್ಟ್ 1 ಹಿಟ್ ಆಗುತ್ತಿದ್ದಂತೆಯೇ ಎರಡನೇ ಭಾಗವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಹಾಗೂ ಮತ್ತಷ್ಟು ಅದ್ಧೂರಿಯಾಗಿ ಮೇಕಿಂಗ್ ಮಾಡುತ್ತಾ ಬರಲಾಗಿದೆ. ಕೆಜಿಎಫ್ 2, ಪುಷ್ಪಾ 2, ಬಾಹುಬಲಿ 2 ಹೀಗೆ ಅನೇಕ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು. ಹಾಗೆಯೇ ಚಂದ್ರು ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಹಾಕಲಿದ್ದಾರಂತೆ.
ಕಬ್ಜ 2 ಬಜೆಟ್ ಹಿಗ್ಗುವುದರ ಜೊತೆಗೆ ಹೆಸರಾಂತ ತಾರಾ ಬಳಗ ಕೂಡ ಇರಲಿದೆಯಂತೆ. ದಕ್ಷಿಣದ ಮತ್ತು ಬಾಲಿವುಡ್ ತಾರೆಯರು ಕೂಡ ಈ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಕುರಿತು ಮಾತನಾಡಿರುವ ಚಂದ್ರು, ‘ಕಬ್ಜ 2 ಅದ್ಧೂರಿಯಾಗಿ ಮತ್ತು ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗುವುದು ಸತ್ಯ. ಕಥೆ ಮತ್ತು ಕಲಾವಿದರ ಬಗ್ಗೆ ಸದ್ಯಕ್ಕೆ ಏನೂ ಅಂದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಎಲ್ಲದರ ಕುರಿತು ಮಾತನಾಡುತ್ತೇನೆ’ ಎನ್ನುತ್ತಾರೆ.