ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲೇ (Congress) ಮೋಸ ಮಾಡುವವರು ಹಾಗೂ ಬೆನ್ನಿಗೆ ಚಾಕು ಹಾಕುವವರು ಇದ್ದಾರೆ. ಕಾಂಗ್ರೆಸ್ ಅನ್ನ ತಿನ್ನುತ್ತೀರಿ, ಸ್ವಲ್ಪ ನಿಷ್ಠೆಯಿಂದ ಇರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ (SS Mallikarjun) ಸ್ವಪಕ್ಷದ ನಾಯಕರ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪಾರ್ವತಮ್ಮ ಶಾಮನೂರ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಒಳಜಗಳಗಳ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.
ನಮಗೆ ಹೊರಗಿನ ಶತ್ರುಗಳೇ ಇಲ್ಲ, ನಾವು ಆರಾಮವಾಗಿ ಚುನಾವಣೆಗಳನ್ನು ಗೆಲ್ಲಬಹುದು. ಆದರೆ, ನಮ್ಮವರೇ ನಮಗೆ ಶತ್ರುಗಳಾಗಿದ್ದಾರೆ. ನಾವೆಲ್ಲರೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದರೆ ಇಲ್ಲಿ ವಿರೋಧ ಪಕ್ಷವೇ ಇರುವುದಿಲ್ಲ. ನಾನು ಎಲ್ಲರನ್ನೂ ನೋಡಿದ್ದೇನೆ, ಯಾವ ಮುಖಂಡ ಏನು ಎತ್ತ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಯಾಕೆ ಇರಬೇಕು? ಭಿನ್ನಾಭಿಪ್ರಾಯ ಇರಬಾರದು. ಬಡವರಿಗೆ ಒಳ್ಳೆಯದಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಖಲೀಲವುಲ್ಲಾ ಅವರಿಗೆ ಸಲಹೆ ನೀಡಿದ ಸಚಿವರು, “ಈಗಲೇ ಎಂಎಲ್ಎ ಆಗಬೇಕು, ಎಂಎಲ್ಸಿ ಆಗಬೇಕು ಎಂದು ಆಸೆಪಡಬೇಡ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ಅದಾಗಿಯೇ ಹುಡುಕಿಕೊಂಡು ಬರುತ್ತದೆ” ಎಂದರು. ಅಲ್ಲದೆ, “ನಾನು ಹಿಂದಿನ ಎಂಎಲ್ಸಿಯನ್ನೂ ನೋಡಿದ್ದೇನೆ” ಎಂದು ಹೇಳುವ ಮೂಲಕ ಮಾಜಿ ಎಂಎಲ್ಸಿ ಅಬ್ದುಲ್ ಜಬ್ಬಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
