ಮೈಸೂರು: ನನ್ನ ಥಿಯೇಟರ್ನಲ್ಲಿ ಬ್ಲೂಫಿಲಂ ತೋರಿಸುತ್ತಿದ್ದೆ ಎಂದು ಕೆಲವರು ಆರೋಪಿಸಿದ್ದರು. ಆದರೆ ನಾನು ಥಿಯೇಟರ್ಗೆ ಇಂದಿರಾಗಾಂಧಿ(Indira Gandhi) ಅವರ ಹೆಸರಿಟ್ಟಿದ್ದೆ, ಅಂತಹ ಕಡೆ ಆ ರೀತಿ ಮಾಡಲು ಸಾಧ್ಯವೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹಳೆಯ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದು ತಿರುಗೇಟು ನೀಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಭವನದಲ್ಲಿ ಲೇಖಕಿ ವೈ.ಎನ್. ರಮ್ಯಾ ಬರೆದಿರುವ ತಮ್ಮ ಕುರಿತಾದ ಚಲಿಸುವ ಬಂಡೆ(Chalisuva Bande) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದ ಏಳುಬೀಳುಗಳು, ಎದುರಿಸಿದ ಅವಮಾನಗಳು ಹಾಗೂ ಮುಂದಿನ ಗುರಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.
ನನ್ನ ಬದುಕು ತೆರೆದ ಪುಸ್ತಕ. ಕೆಲವರು ನನ್ನನ್ನು ರೌಡಿ, ಚಾಕು ಚೂರಿ ಎಂದು ಕರೆದರು. ಈಗ ಏನೆಂದು ಕರೆಯುತ್ತಾರೆ ಹೇಳಿ?” ಎಂದು ಪ್ರಶ್ನಿಸಿದ ಸಿಎಂ, ತಮ್ಮ ಶೈಕ್ಷಣಿಕ ದಿನಗಳನ್ನು ಸ್ಮರಿಸಿಕೊಂಡರು. 48ನೇ ವಯಸ್ಸಿನಲ್ಲಿ ನಾನು ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದದ್ದು ನನ್ನ ಜೀವನದ ಅತ್ಯಂತ ಸಂತೋಷದ ಮತ್ತು ಐತಿಹಾಸಿಕ ದಿನ. ಆ ದಿನ ಪದವಿ ಸರ್ಟಿಫಿಕೇಟ್ ಪಡೆಯಲು ಎಲ್ಲರೂ ನನ್ನನ್ನು ವೇದಿಕೆ ಹತ್ತಿಸಲು ಪ್ರಯತ್ನಪಟ್ಟರು. ಆದರೆ ಬಿಜೆಪಿಯ ಶಂಕರಮೂರ್ತಿ ಅವರು ಅವತ್ತು ನನಗೆ ವೇದಿಕೆ ಹತ್ತಿಸದೆ ಅವಮಾನ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ನನಗೆ ಸನ್ಮಾನಗಳಿಂದ ದೂರವಿರುವುದು ಇಷ್ಟ, ನನ್ನ ಬಗ್ಗೆ ಪುಸ್ತಕದ ವ್ಯಾಮೋಹವೂ ಇಲ್ಲ. ಇದೊಂದು ನನಗೆ ಮುಜುಗರದ ಸಂದರ್ಭ. ಜನ ನನಗೆ ‘ಬಂಡೆ’ ಅದು ಇದು ಎಂದು ಏನೇನೋ ಹೆಸರು ಇಟ್ಟಿದ್ದಾರೆ. ಆದರೆ ನಾನು ಯಾವಾಗಲೂ ಡಿ.ಕೆ. ಶಿವಕುಮಾರ್ ಅಷ್ಟೇ ಎಂದರು. ಬಂಗಾರಪ್ಪ, ಎಸ್.ಎಂ. ಕೃಷ್ಣ ಹಾಗೂ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಅವರು ಹೇಗೆ ಮುಖ್ಯಮಂತ್ರಿ ಆದರು ಮತ್ತು ಅದರಲ್ಲಿ ನನ್ನ ಪಾತ್ರ ಏನಿತ್ತು ಎಂಬುದರ ಬಗ್ಗೆ ಬಹಳ ಮಾತನಾಡುವುದಿದೆ, ಮುಂದೆ ಯಾವಾಗಲಾದರೂ ಅದನ್ನು ದಾಖಲಿಸುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು. ಇದನ್ನೂ ಓದಿ: ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ
35 ವರ್ಷಗಳ ಹಿಂದೆಯೇ ನೀನು ನನಗೆ ಸಿಎಂ ಆಗಲಿದ್ಯಾ ಎಂದು ಜ್ಯೋತಿಷ್ಯ ಹೇಳಿದ್ದರು. ನಾನು ಸುಮ್ಮನೆ ಇಲ್ಲಿ ಬಂದು ಕೂತಿಲ್ಲ, ಬೇಕಾದಷ್ಟು ನಾಯಕರನ್ನು ಬೆಳೆಸಿ ಇಲ್ಲಿಗೆ ಬಂದಿದ್ದೇನೆ. ಜೈಲಲ್ಲಿ ಕೂತಿದ್ದಾಗಲೇ ನನ್ನ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಹಾಗೂ ನಾನು ಸಿಎಂ ಆಗುತ್ತೇನೆ ಎಂದು ಯೋಜನೆ ಮಾಡಿದ್ದೆ ಎಂದು ತಮ್ಮ ಸಂಕಲ್ಪವನ್ನು ನೆನೆದರು.
ನಾನು ಸಿಎಂ ಆಗಿರುವುದನ್ನು ವಿಪಕ್ಷಗಳು ಸಹಿಸುತ್ತಿಲ್ಲ. ಪ್ರತಿದಿನವೂ ನನ್ನ ಬಗ್ಗೆ ನೆಗೆಟಿವ್ ಹುಡುಕುತ್ತಾರೆ. ಕೆಲವರಿಗೆ ಸುಳ್ಳೇ ಮನೆ ದೇವರಾಗಿದೆ. ನಾನು ತಾಳ್ಮೆಯಿಂದ ಇದ್ದೇನೆ, ಯಾರಿಗೂ ಮೋಸ ಮಾಡಬೇಕು ಎಂಬ ಮನಸ್ಸು ನನಗಿಲ್ಲ ಎಂದರು.
ಸಿದ್ದರಾಮಯ್ಯ ಅವರಿಗೆ ನಾನು ಯಾವತ್ತೂ ಕೇಡು ಬಯಸಿಲ್ಲ, ಮುಂದೆಯೂ ಬಯಸುವುದಿಲ್ಲ. ಕುಮಾರಸ್ವಾಮಿ ಅವರ ಜೊತೆ ಸರ್ಕಾರ ಮಾಡಿದ್ದಾಗಲೂ ಅವರಿಗೆ ಕೇಡು ಬಯಸಲಿಲ್ಲ. ಆದರೆ ಈಗ ಕುಮಾರಸ್ವಾಮಿ ಅವರಿಗೆ ನನ್ನನ್ನು ಸಹಿಸಲು ಆಗುತ್ತಿಲ್ಲ ಎಂದು ಟೀಕಿಸಿದರು. ಇದೇ ವೇಳೆ, “ನಾನು ಸಿಎಂ ಆದರೂ ತನ್ವೀರ್ ಸೇಠ್ ಅವರನ್ನು ಮಂತ್ರಿ ಮಾಡಿಕೊಳ್ಳಲು ಆಗಲಿಲ್ಲ ಎಂಬ ವ್ಯಥೆ ಮತ್ತು ನೋವು ನನಗಿದೆ” ಎಂದು ಹೇಳಿದರು.
ಅದೃಷ್ಟದ ಮೇಲೆ ನಂಬಿಕೆ ಇಡಬೇಡಿ, ಶ್ರಮದ ಮೇಲೆ ನಂಬಿಕೆ ಇಡಿ. ನಾನು ಈ ಸ್ಥಾನಕ್ಕೆ ಬರಲು ಬಹಳ ಶ್ರಮ ಪಟ್ಟಿದ್ದೇನೆ. ಎಲ್ಲರೂ ನನ್ನ ರೀತಿ ಯಶಸ್ವಿಯಾಗಲು ಸಾಧ್ಯವಿಲ್ಲ. ನಾನು ನನ್ನ ಆಡಳಿತದಲ್ಲಿ ಯಾರಿಗೂ ಕೇಡು ಬಯಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
