ಹುಬ್ಬಳ್ಳಿ: ಧಾರವಾಡ (Dharawada) ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಮಾಫಿಯಾದ (StoneMafia) ಅಬ್ಬರ ಮಿತಿಮೀರಿದ್ದು, ಹಗಲು-ರಾತ್ರಿ ಎನ್ನದೆ ಸರ್ಕಾರದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಜಿಲ್ಲೆಯ ಕಲಘಟಗಿ(Kalaghatgi) ತಾಲೂಕಿನ ಉಗ್ನಿಕೇರಿ ಗ್ರಾಮದಲ್ಲಿ ಯಾವುದೇ ಭಯವಿಲ್ಲದೆ ನಡೆಯುತ್ತಿರುವ ಈ ಅಕ್ರಮ ದಂಧೆ, ಅಧಿಕಾರಿಗಳ ಮೌನದಿಂದಾಗಿ ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮೂಲಗಳ ಪ್ರಕಾರ, ಉಗ್ನಿಕೇರಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 15 ಕಂಪನಿಗಳಿಗೆ 35 ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಲು ಕಾನೂನಾತ್ಮಕ ಅನುಮತಿ ನೀಡಲಾಗಿದೆ. ಆದರೆ ಈ ಕಂಪನಿಗಳು ತಮಗೆ ನೀಡಿರುವ ಪರವಾನಗಿಯ ಮಿತಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ. ಜೆಸಿಬಿ ಹಾಗೂ ಅತ್ಯಾಧುನಿಕ ಭಾರಿ ಯಂತ್ರೋಪಕರಣಗಳನ್ನು ಬಳಸಿ, ನಿಗದಿಗಿಂತ ಹೆಚ್ಚಿನ ಭೂಮಿಯನ್ನು ನೂರಾರು ಅಡಿ ಆಳಕ್ಕೆ ಅಗೆದು ಕಲ್ಲುಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ.
ಪ್ರತಿದಿನ ನೂರಾರು ಟನ್ ಕಲ್ಲುಗಳನ್ನು ನಿಯಮಬಾಹಿರವಾಗಿ ವಿವಿಧ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ರಾಯಲ್ಟಿ (ರಾಜಸ್ವ) ನಷ್ಟ ಉಂಟಾಗುತ್ತಿದೆ. ಇದರೊಂದಿಗೆ, ನಿರಂತರ ಸ್ಫೋಟ ಮತ್ತು ಅಗೆತದಿಂದಾಗಿ ಇಡೀ ಪರಿಸರ ಸಮತೋಲನ ಹದಗೆಟ್ಟಿದೆ. ಗಣಿಗಾರಿಕೆ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಬೃಹತ್ ಗಾತ್ರದ ಕಂದಕಗಳು ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತಿವೆ.

ಮುಖ್ಯ ರಸ್ತೆಯ ಇಕ್ಕೆಲಗಳಲ್ಲೇ ನೂರಾರು ಅಡಿ ಆಳದ ಗುಂಡಿಗಳನ್ನು ತೋಡಲಾಗಿದ್ದು, ಭಾರಿ ವಾಹನಗಳ ಸಂಚಾರದ ನಡುವೆ ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಸ್ಫೋಟಕಗಳ ಬಳಕೆ, ಧೂಳಿನ ಅಬ್ಬರ ಹಾಗೂ ಭಾರಿ ಲಾರಿಗಳ ಓಡಾಟದಿಂದ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯ ಮತ್ತು ನೆಮ್ಮದಿ ನಾಶವಾಗಿದೆ. ಗಣಿಗಾರಿಕೆ ಪ್ರದೇಶದಲ್ಲಿ ಯಾವುದೇ ಕನಿಷ್ಠ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ – ತನಿಖಾ ತಂಡದ ಕಾರು ಚಾರ್ಮಾಡಿಯಲ್ಲಿ ಪಲ್ಟಿ
ಅಧಿಕಾರಿಗಳ ಮೌನ
ಮುಖ್ಯ ರಸ್ತೆಯ ಪಕ್ಕದಲ್ಲೇ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸ್ಥಳೀಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳ ಆಶ್ರಯದಲ್ಲೇ ಈ ಕಲ್ಲು ಮಾಫಿಯಾ ನಡೆಯುತ್ತಿರುವುದರಿಂದಲೇ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಜಿಲ್ಲಾಧಿಕಾರಿಗಳ ಭರವಸೆ
ಈ ಗಂಭೀರ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಅವರು, ಪ್ರಕರಣದ ಕುರಿತು ಸಂಪೂರ್ಣ ಪರಿಶೀಲನೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಮತ್ತು ನಿಯಮ ಉಲ್ಲಂಘಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್ ಶಿಪ್‌ಗೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ದಾಖಲಾತಿ ಬಹಿರಂಗ ಮಾಡಿ- ಛಲವಾದಿ ನಾರಾಯಣಸ್ವಾಮಿ
