ಮುಂಬೈ: ಮಹಾರಾಷ್ಟ್ರದ (Maharashtra) ಲೋಹಗಡ ಕೋಟೆಯಿಂದ (Lohagad Fort) ತಳ್ಳಿ ಭಾವಿ ಪತಿ ಕೇತನ್ ಅಗರ್ವಾಲ್ ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸಿಯಾ ಗೋಯಲ್ ಪಾಲಿಗ್ರಾಫ್ (Lie Detector Test) ಪರೀಕ್ಷೆಗೆ ಒಳಗಾಗಲು ಒಪ್ಪಿಗೆ ನೀಡಿದ್ದಾಳೆ.
ಸುಳ್ಳು ಪತ್ತೆ ಪರೀಕ್ಷೆಗೆ ಆರೋಪಿಯ ಒಪ್ಪಿಗೆ ಅವಶ್ಯಕವಾಗಿ ಬೇಕು ಎಂಬ ಕಾನೂನಿದೆ. ಆದ್ದರಿಂದ ಆಕೆಯನ್ನು ಲೋನಾವಾಲ ಗ್ರಾಮೀಣ ಠಾಣೆ ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಒಪ್ಪಿಗೆ ನೀಡಿದ್ದಾಳೆ ಎಂದು ಗೋಯಲ್ ಪರ ವಕೀಲ ವಿಪುಲ್ ಡುಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಶಿವಾಜಿ ಮಹಾರಾಜರ ಶೌರ್ಯಕ್ಕೆ ಸಾಕ್ಷಿಯಾದ ಕೋಟೆಗೆ ʻಸಿಯಾ ಪಾಯಿಂಟ್ʼ ಹೆಸರು ಕಳಂಕ – ಸ್ಥಳೀಯರ ಆಕ್ರೋಶ
ಇಂದು (ಜು.2) ಪೊಲೀಸರು ಸಿಯಾಳನ್ನು ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ದಿದ್ದರು. ಅಲ್ಲಿ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಕೇತನ್‌ನನ್ನು ಬಂಡೆಯಿಂದ ಹೇಗೆ ತಳ್ಳುವುದು ಎಂದು ಪೂರ್ವಾಭ್ಯಾಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲೋಹಗಡ ಕೋಟೆಯಿಂದ (Lohagad Fort) ಬಿದ್ದು ಸಾವನ್ನಪ್ಪಿದ್ದ ಕೇತನ್ ಅಗರ್ವಾಲ್‌ನನ್ನು ಕೆಳಗೆ ತಳ್ಳಿದ್ದು ಯಾರು ಎನ್ನುವುದಕ್ಕೆ ಸದ್ಯಕ್ಕೆ ಯಾವುದೇ ನಿಖರ ಹಾಗೂ ನಿರ್ಣಾಯಕ ಪುರಾವೆಗಳು ಸಿಕ್ಕಿಲ್ಲ. ಅಲ್ಲದೇ ಸಿಯಾ ಹೇಳಿಕೆಗಳು ಗೊಂದಲಗಳಿಗೆ ಕಾರಣವಾಗಿವೆ. ಇದರಿಂದಾಗಿ ಗೋಯಲ್ ಮತ್ತು ಚೇತನ್ ಇಬ್ಬರ ಮೇಲೂ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುಮತಿ ಕೋರಿ ಪುಣೆ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯವು ಪೊಲೀಸರ ಈ ಮನವಿಯನ್ನು ಪರಿಶೀಲಿಸುತ್ತಿದ್ದು ಸಿಯಾಳ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ.
ಏನಿದು ಸುಳ್ಳು ಪತ್ತೆ ಪರೀಕ್ಷೆ?
ವ್ಯಕ್ತಿಯು ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದಾಗ ಆತನ ದೇಹದಲ್ಲಿ ಉಂಟಾಗುವ ಜೈವಿಕ ಬದಲಾವಣೆಗಳನ್ನು ಆಧರಿಸಿ ಪರೀಕ್ಷೆ ನಡೆಸಲಾಗುತ್ತದೆ. ವ್ಯಕ್ತಿಯು ಸುಳ್ಳು ಹೇಳುವಾಗ ಆತನ ಮನಸ್ಸಿನಲ್ಲಿ ಸಣ್ಣದೊಂದು ಭಯ ಅಥವಾ ಆತಂಕ ಸೃಷ್ಟಿಯಾಗುತ್ತದೆ. ಇದನ್ನು ತಡೆಯಲು ಮೆದುಳು ಪ್ರಯತ್ನಿಸಿದಾಗ ದೇಹದಲ್ಲಿ ತಾನಾಗಿಯೇ ಕೆಲವು ಸ್ವಯಂಚಾಲಿತ ಬದಲಾವಣೆಗಳು ಸಂಭವಿಸುತ್ತವೆ.
ವ್ಯಕ್ತಿಯ ದೇಹಕ್ಕೆ ಸೆನ್ಸರ್‌ಗಳನ್ನು ಅಳವಡಿಸಿ, ಪ್ರಶ್ನೆಗಳನ್ನು ಕೇಳಿದಾಗ ಅವರಲ್ಲಿ ಬದಲಾಗುವ ರಕ್ತದೊತ್ತಡ, ಹೃದಯ ಬಡಿತ, ಉಸಿರಾಟದ ವೇಗ, ಮತ್ತು ಬೆವರಿನ ಪ್ರಮಾಣವನ್ನು ಗ್ರಾಫ್‌ಗಳ ಮೂಲಕ ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ. ಸತ್ಯ ಹೇಳುವಾಗ ಗ್ರಾಫ್ ಸರಳ ರೇಖೆಯಲ್ಲಿರುತ್ತದೆ, ಆದರೆ ಸುಳ್ಳು ಹೇಳಿದಾಗ ಜೈವಿಕ ಏರುಪೇರುಗಳಿಂದಾಗಿ ಗ್ರಾಫ್‌ನಲ್ಲಿ ಭಾರೀ ಏರಿಳಿತ ಕಂಡುಬರುತ್ತದೆ. ಇದನ್ನೂ ಓದಿ: ಮೇಲುಗಡೆಯಿಂದ ತಳ್ಳಿದ್ದು ಯಾರು? – ಸಿಯಾ ಸುಳ್ಳು ಪತ್ತೆ ಪರೀಕ್ಷೆಗೆ ಪೊಲೀಸರ ಪಟ್ಟು
