ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿರುದ್ಧದ ವಿವಾದಿತ ಸ್ಟಿಂಗ್ ಆಪರೇಷನ್(Sting Operation) ಪ್ರಕರಣದ ತನಿಖೆ ಈಗ ಸಂಪೂರ್ಣ ಮಂಕಾಗಿದ್ದು, “ಕೋಲು ಮುರಿಯಲಿಲ್ಲ, ಹಾವು ಸಾಯಲಿಲ್ಲ” ಎನ್ನುವಂತಾಗಿದೆ. ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದ್ದ ಈ ಪ್ರಕರಣದಲ್ಲಿ ಸಿಸಿಬಿ (CCB) ಪೊಲೀಸರು ಯಾವುದೇ ಮಹತ್ವದ ಪ್ರಗತಿ ಕಾಣದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.
ಈ ಕೃತ್ಯದ ಹಿಂದೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರ ಕೈವಾಡವಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ನಾಯಕರು ನೇರ ಆರೋಪ ಮಾಡುತ್ತಿದ್ದಾರೆ. ಆದರೆ ಪ್ರಕರಣದಲ್ಲಿ ಕೇಳಿಬಂದಿರುವ ರಿತೇಶ್ ಪಾಂಡೆ ಯಾರೆಂಬುದೇ ತಮಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಈಗಾಗಲೇ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಮತ್ತೊಂದೆಡೆ, ಪ್ರಕರಣದ ಪ್ರಮುಖ ಕೊಂಡಿ ಎನ್ನಲಾದ ಪ್ರಜ್ವಲ್ ಪ್ರಸಾದ್ ಅವರ ಹೇಳಿಕೆಯನ್ನು ಸಿಸಿಬಿ ಪೊಲೀಸರು ಈವರೆಗೂ ಅಧಿಕೃತವಾಗಿ ದಾಖಲಿಸಿಕೊಂಡಿಲ್ಲ. ಕುಮಾರಸ್ವಾಮಿ ಅವರ ಮೇಲೆ ಮಾಡಲಾದ ಆರೋಪಗಳಿಗೆ ಪೂರಕವಾಗಿ ಒಂದೇ ಒಂದು ಬಲವಾದ ಸಾಕ್ಷ್ಯ ಸಂಗ್ರಹಿಸಲು ತನಿಖಾಧಿಕಾರಿಗಳು ವಿಫಲರಾಗಿದ್ದಾರೆ.
ಹೇಗಾದರೂ ಮಾಡಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆಸಲೇಬೇಕೆಂದು ಸರ್ಕಾರದ ಮಟ್ಟದಲ್ಲಿ ತೀವ್ರ ಒತ್ತಡವಿದೆ ಎನ್ನಲಾಗಿದೆ. ಆದರೆ ಕೇಂದ್ರ ಸಚಿವರ ಮಟ್ಟದ ನಾಯಕರನ್ನು ವಿಚಾರಣೆಗೆ ಒಳಪಡಿಸಲು ಅಗತ್ಯವಿರುವ ಸೂಕ್ತ ಹಾಗೂ ಕಾನೂನುಬದ್ಧ ಸಾಕ್ಷ್ಯಾಧಾರಗಳು ಪೊಲೀಸರ ಬಳಿ ಲಭ್ಯವಿಲ್ಲ. ಹೀಗಾಗಿ ನೋಟಿಸ್ ಜಾರಿ ಮಾಡಲು ಸಾಧ್ಯವಾಗದೆ ಸಿಸಿಬಿ ಪೊಲೀಸರು ತೀವ್ರ ಮುಜುಗರ ಹಾಗೂ ಪರದಾಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾದ್ರೆ ಮುಂದಿನ ಚುನಾವಣೆಯಲ್ಲಿ ಪ್ರಚಾರಕ್ಕೆ ಬರಲ್ಲ – ರಾಹುಲ್ಗೆ ಸಿದ್ರಾಮಯ್ಯ ಚಾರ್ಜ್ಶೀಟ್
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಆಪ್ತರ ಕೈವಾಡವಿದೆ. ನಾನು ಪುರಾವೆಗಳ ಆಧಾರದಲ್ಲಿ ಹೇಳುತ್ತಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಪ್ರಿಯಾಂಕ್ ಹೇಳಿಕೆಗೆ ತಿರುಗೇಟು ನೀಡಿದ್ದ ಹೆಚ್ಡಿಕೆ, ನನ್ನನ್ನು ಅಷ್ಟು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ. ಪೂರ್ತಿ ಪಿಕ್ಚರ್ ನಾನು ತೋರಿಸುತ್ತೇನೆ. ಈ ಸರ್ಕಾರ, ಸರ್ಕಾರದ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಯಾರಿಂದಲೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದಿದ್ದರು.
