ಸಂಜೆಯ ಸಮಯದಲ್ಲಿ ಬಿಸಿಬಿಸಿಯಾಗಿ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸಿದರೆ ಎಗ್ ಪಫ್ ಉತ್ತಮ ಆಯ್ಕೆ. ಬೇಕರಿಗಳಲ್ಲಿ ಸಿಗುವ ರುಚಿಕರವಾದ ಎಗ್ ಪಫ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಮೊಟ್ಟೆ, ಈರುಳ್ಳಿ ಮತ್ತು ಮಸಾಲೆಗಳನ್ನು ಬಳಸಿ ಬ್ರೆಡ್ನಲ್ಲೇ ಗರಿಗರಿಯಾದ ಎಗ್ ಪಫ್ ಮಾಡಬಹುದು. ಇದನ್ನು ತವಾ, ಎಣ್ಣೆ ಅಥವಾ ಓವನ್ ಬಳಸಿ ಕೂಡ ತಯಾರಿಸಬಹುದು. ಸಿಂಪಲ್ ಹಾಗೂ ಸುಲಭವಾಗಿ ಬ್ರೆಡ್ ಎಗ್ಪಫ್ ಮಾಡುವ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು ಮತ್ತು ಅಳತೆ
ಬ್ರೆಡ್ ಸ್ಲೈಸ್ – 4 ರಿಂದ 6
ಬೇಯಿಸಿದ ಮೊಟ್ಟೆ – 2 ರಿಂದ 3
ಈರುಳ್ಳಿ – 2 (ಸಣ್ಣಗೆ ಹೆಚ್ಚಿದ್ದು)
ಹಸಿರು ಮೆಣಸಿನಕಾಯಿ – 1 (ಸಣ್ಣಗೆ ಹೆಚ್ಚಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿನ ಪುಡಿ – ¼ ಚಮಚ
ಖಾರದ ಪುಡಿ – ½ ಚಮಚ
ಗರಂ ಮಸಾಲಾ – ½ ಚಮಚ
ಎಣ್ಣೆ – 2 ಚಮಚ
ಮೈದಾ ಹಿಟ್ಟು – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ ಅಥವಾ ಎಣ್ಣೆ – ಬೇಯಿಸಲು ಅಗತ್ಯವಿರುವಷ್ಟು
ಮಾಡುವ ವಿಧಾನ
ಮೊದಲು ಮೊಟ್ಟೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಮೊಟ್ಟೆಯ ಸಿಪ್ಪೆ ತೆಗೆದು ಅರ್ಧಕ್ಕೆ ಕತ್ತರಿಸಿ ಪ್ರತ್ಯೇಕವಾಗಿ ಇಟ್ಟುಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಈರುಳ್ಳಿ ಲೈಟ್ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹಸಿರು ಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ಈಗ ಅರಿಶಿನ ಪುಡಿ, ಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆ ಸೀದು ಹೋಗದಂತೆ ಎಚ್ಚರಿಕೆ ವಹಿಸಿ. ಮಸಾಲೆ ಸಿದ್ಧವಾದ ಬಳಿಕ ತಣ್ಣಗಾಗಲು ಬಿಡಿ.
ನಂತರ ಬ್ರೆಡ್ ಸ್ಲೈಸ್ಗಳ ಕಂದು ಬಣ್ಣದ ಅಂಚುಗಳನ್ನು ಕತ್ತರಿಸಿ. ಚಪಾತಿ ಲಟ್ಟಣಿಗೆಯಿಂದ ಬ್ರೆಡ್ಗಳನ್ನು ಲಟ್ಟಿಸಿ ಚಪ್ಪಟೆ ಮಾಡಿಕೊಳ್ಳಿ.
ಒಂದು ಸಣ್ಣ ಬಟ್ಟಲಿನಲ್ಲಿ 2 ಚಮಚ ಮೈದಾ ಹಿಟ್ಟು ಮತ್ತು ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಬ್ರೆಡ್ ಮಧ್ಯದಲ್ಲಿ ತಯಾರಿಸಿದ ಈರುಳ್ಳಿ ಮಸಾಲೆ ಮತ್ತು ಅರ್ಧ ಮೊಟ್ಟೆಯನ್ನು ಇಡಿ. ಬ್ರೆಡ್ನ ನಾಲ್ಕೂ ಅಂಚುಗಳಿಗೆ ಮೈದಾ ಪೇಸ್ಟ್ ಸವರಿ ತ್ರಿಕೋನ ಅಥವಾ ಆಯತಾಕಾರದ ಆಕಾರದಲ್ಲಿ ಮಡಚಿ ಅಂಚುಗಳನ್ನು ಗಟ್ಟಿಯಾಗಿ ಒತ್ತಿ ಮುಚ್ಚಿ.
ಬೇಯಿಸುವ ವಿಧಾನ
ತವಾ ಮೇಲೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಸಿದ್ಧಪಡಿಸಿದ ಬ್ರೆಡ್ ಪಫ್ಗಳನ್ನು ಇಟ್ಟು ಕಡಿಮೆ ಉರಿಯಲ್ಲಿ ಎರಡೂ ಬದಿಗಳು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಬೇಯಿಸಿಕೊಳ್ಳಿ.
ಡೀಪ್ ಫ್ರೈ ಮಾಡಲು ಬಯಸಿದರೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಿದ್ಧಪಡಿಸಿದ ಪಫ್ಗಳನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.
ಓವನ್ ಬಳಸುವುದಾದರೆ 180°C ತಾಪಮಾನದಲ್ಲಿ ಪ್ರೀಹೀಟ್ ಮಾಡಿ. ಪಫ್ಗಳ ಮೇಲೆ ಸ್ವಲ್ಪ ಬೆಣ್ಣೆ ಅಥವಾ ಹಾಲು ಹಚ್ಚಿ ಸುಮಾರು 10–12 ನಿಮಿಷ ಬೇಕ್ ಮಾಡಿಕೊಳ್ಳಿ. ಓವನ್ಗಳ ತಾಪಮಾನಕ್ಕೆ ಅನುಗುಣವಾಗಿ ಸಮಯ ಬದಲಾಗಬಹುದು.
ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ರುಚಿಕರ ಎಗ್ ಪಫ್ ಅನ್ನು ಟೊಮೆಟೊ ಸಾಸ್ ಅಥವಾ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ



